ಸಾರಾಂಶ
ಮದ್ದೂರು : ತಾಲೂಕಿನ ಕೋಣಸಾಲೆ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಶವ ಗ್ರಾಮದ ವಿಶ್ವೇಶ್ವರಯ್ಯ ನಾಲೆಯಲ್ಲಿ ಭಾನುವಾರ ಪತ್ತೆಯಾಗಿದೆ.
ಗ್ರಾಮದ ಕೆ.ಪಿ.ರವಿ ಮತ್ತು ನಿರ್ಮಲ ದಂಪತಿ ಪುತ್ರ ಪ್ರೀತಮ್ (26) ಶವ ಕೊಳೆತ ಸ್ಥಿತಿಯಲ್ಲಿ ದೊರಕಿದೆ. ಪ್ರೀತಮ್ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮನೆಯಿಂದ ದಿನನಿತ್ಯ ವಾಕಿಂಗ್ ಹೋಗುತ್ತಿದ್ದ ಪ್ರೀತಮ್ ತನ್ನ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದನು. ಈ ಬಗ್ಗೆ ಪೋಷಕರು ಬೆಸಗರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಭಾನುವಾರ ಗ್ರಾಮದ ಮರಳಿಗ ಮತ್ತು ಕೋಣಸಾಲೆ ಮಧ್ಯೆ ಹಾದುಹೋಗಿರುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಪ್ರೀತಮ್ ಶವ ಕೊಳೆತ ಸ್ಥಿತಿಯಲ್ಲಿ ದೊರೆತಿದೆ. ಇದು ಆತ್ಮಹತ್ಯೆ ಯೋ ಅಥವಾ ಕೊಲೆಯೊ ಎಂಬ ಬಗ್ಗೆ ಬೆಸಗರಹಳ್ಳಿ ಪೊಲೀಸರು ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಹಾಗೂ ಪಿಎಸ್ಐ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ನಂತರ ಪ್ರೀತಮ್ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.
ಕಿಡಿಗೇಡಿಗಳ ಕೃತ್ಯಕ್ಕೆ ಅಡಿಕೆ, ತೆಂಗು ಸಸಿ ನಾಶ
ಕಿಕ್ಕೇರಿ: ಸಮೀಪದ ಕರೋಟಿ ಗ್ರಾಮದಲ್ಲಿ ರೈತ ಬೆಳೆದ ತೆಂಗು, ಅಡಿಕೆ ಸಸಿಗಳನ್ನು ಕಿಡಿಗೇಡಿಗಳು ನಾಶ ಮಾಡಿದ ಪ್ರಕರಣ ಸೋಮವಾರ ನಡೆದಿದೆ.
ಗ್ರಾಮದ ರೈತ ನಾಗರಾಜು ಅವರು ತಮ್ಮ ತೋಟದಲ್ಲಿ ಸುಮಾರು 2 ವರ್ಷದಿಂದ 30 ಅಡಿಕೆ, 25 ತೆಂಗಿನ ಸಸಿಗಳನ್ನು ಬೆಳೆಸಿದ್ದರು. ಕಿಡಿಗೇಡಿಗಳ ಕೃತ್ಯಕ್ಕೆ ಸಸಿಗಳು ನಾಶವಾಗಿದೆ. ಇದೇ ರೀತಿ ನಾಲ್ಕೈದು ಬಾರಿ ತಮ್ಮ ಜಮೀನಿನಲ್ಲಿ ಕಿಡಿಗೇಡಿಗಳು ತೋಟದಲ್ಲಿನ ಗಿಡಗಳನ್ನು ಹಾಳು ಮಾಡಿದ್ದಾರೆ ಎಂದು ರೈತ ಅಲವತ್ತುಕೊಂಡಿದ್ದಾರೆ. ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.