ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಮದ್ದೂರು ತಹಸೀಲ್ದಾರ್ ಭೇಟಿ, ಪರಿಶೀಲನೆ

| Published : Aug 08 2025, 01:01 AM IST

ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಮದ್ದೂರು ತಹಸೀಲ್ದಾರ್ ಭೇಟಿ, ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ರಸಗೊಬ್ಬರ ಮಾರಾಟ ಮಳಿಗೆ, ಕೋಟಿಲಿಂಗೇಶ್ವರ ಟ್ರೇಡರ್ಸ್ ಹಾಗೂ ಗ್ರೋಮರ್ ಗೊಬ್ಬರ ಮಾರಾಟ ಮಳಿಗೆಗೆ ಸಹಾಯಕ ಕೃಷಿ ನಿರ್ದೇಶಕಿ ಎಚ್.ಜಿ.ಪ್ರತಿಭಾ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ವಿವಿಧ ರಸಗೊಬ್ಬರಗಳ ಮಾರಾಟ ಮಳಿಗೆಗಳಿಗೆ ತಹಸೀಲ್ದಾರ್ ಪರುಶುರಾಮ ಸತ್ತಿಗೇರಿ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ರಸಗೊಬ್ಬರ ಮಾರಾಟ ಮಳಿಗೆ, ಕೋಟಿಲಿಂಗೇಶ್ವರ ಟ್ರೇಡರ್ಸ್ ಹಾಗೂ ಗ್ರೋಮರ್ ಗೊಬ್ಬರ ಮಾರಾಟ ಮಳಿಗೆಗೆ ಸಹಾಯಕ ಕೃಷಿ ನಿರ್ದೇಶಕಿ ಎಚ್.ಜಿ.ಪ್ರತಿಭಾ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರಸ ಗೊಬ್ಬರ ದಾಸ್ತಾನು ಪ್ರಮಾಣ , ದರಪಟ್ಟಿ, ಮಾರಾಟ ರಶೀತಿ ಹಾಗೂ ದಾಸ್ತಾನನ್ನು ಮಳಿಗೆ ಮುಂಭಾಗದ ಫಲಕದಲ್ಲಿ ಅಳವಡಿಸಿದ ಬಗ್ಗೆ ಮಾರಾಟಗಾರರನ್ನು ತರಾಟೆಗೆ ತೆಗೆದುಕೊಂಡರು.

ಟಿಎಪಿಸಿಎಂಎಸ್ ಚಿಲ್ಲರೆ ಮಾರಾಟ ಮಳಿಗೆಯಲ್ಲಿ ರಸ ಗೊಬ್ಬರದ ಮಾರಾಟದ ದರ, ಪ್ರಮಾಣ ಪ್ರದರ್ಶನ ಮಾಡದಿರುವ ಬಗ್ಗೆ ಸಂಘದ ಸಿಇಓ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ ಅವರಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಕೋಟಿಲಿಂಗೇಶ್ವರ ಟ್ರೇಡರ್ಸ್ ನಲ್ಲೂ ಸಹ ರಸಗೊಬ್ಬರ ದರ ಪಟ್ಟಿ, ವಿತರಣಾ ಪ್ರಮಾಣ ಹಾಗೂ ನಿಖರವಾದ ಲೆಕ್ಕ ಪತ್ರ ಇಲ್ಲದ ಹಿನ್ನೆಲೆಯಲ್ಲಿ ಟ್ರೇಡರ್ಸ್ ನ ಲೈಸೆನ್ಸ್ ರದ್ದುಪಡಿಸುವಂತೆ ತಹಶೀಲ್ದಾರ್ ಸತ್ತಿಗೇರಿ ಸೂಚನೆ ನೀಡಿದರು.

ನಂತರ ಗ್ರೋಮರ್ ಮಾರಾಟ ಮಳಿಗೆಗೆ ಭೇಟಿ ನೀಡಿದ ಅವರು ರಸಗೊಬ್ಬರ ಖರೀದಿಗೆ ಬಂದಿದ್ದ ರೈತರಿಗೆ ನ್ಯಾನೋ ಯೂರಿಯಾ ಬಳಸುವುದು ಹಾಗೂ ಬೆಳೆಗಳಿಗೆ ಕಾಂಪ್ಲೆಕ್ಸ್ ಯೂರಿಯಾ ಬಳಸುವಂತೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮನವಿ ಮಾಡಿದರು. ಸಹಾಯಕ ಕೃಷಿ ಅಧಿಕಾರಿ ರೂಪ ಶ್ರೀ, ರಾಜತ್ವ ನಿರೀಕ್ಷಕ ಮೋಹನ್, ಗ್ರಾಮ ಆಡಳಿತ ಅಧಿಕಾರಿಗಳಾದ ಹರೀಶ್, ಷಣ್ಮುಖ ಇದ್ದರು.

ಹೃತೀಕ್ಷಾ ಚಿಕಿತ್ಸೆಗೆ ನಿರ್ಲಕ್ಷ್ಯ: ತನಿಖೆಗೆ ಆದೇಶ

ಕನ್ನಡಪ್ರಭ ವಾರ್ತೆ ಮಂಡ್ಯ

ನಾಯಿ ಕಡಿತಕ್ಕೊಳಗಾಗಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಅಪಘಾತದಲ್ಲಿ ಮೃತಪಟ್ಟ ಬಾಲಕಿ ಹೃತೀಕ್ಷಾ ಪ್ರಕರಣದಲ್ಲಿ ಮದ್ದೂರು ವೈದ್ಯಾಧಿಕಾರಿ ನಿರ್ಲಕ್ಷದ ವಿರುದ್ಧ ತನಿಖೆ ನಡೆಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಕಳೆದ ಮೇ ೨೬ ರಂದು ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರೊಂದಿಗೆ ಮಂಡ್ಯಕ್ಕೆ ತೆರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಹೃತೀಕ್ಷಾ ಎಂಬ ಬಾಲಕಿ ಮೃತಪಟ್ಟಿದ್ದಳು. ಆ ಹಿನ್ನೆಲೆಯಲ್ಲಿ ಮದ್ದೂರು ವೈದ್ಯಾಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ದೂರು ನೀಡಿ. ಮಗುವಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದರೂ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡದೆ ಅಗತ್ಯ ಚಿಕಿತ್ಸೆ ನೀಡದೆ ಉಪಚರಿಸದೆ ಮದ್ದೂರು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ.

ಈ ರೀತಿಯ ಪ್ರಕರಣಗಳು ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ಜರುಗದಂತೆ ಅಗತ್ಯ ತನಿಖೆ ನಡೆಸಿ ಕ್ರಮ ವಹಿಸುವಂತೆ ದೂರಿದ್ದರು. ಈ ಹಿನ್ನೆಲೆಯಲ್ಲಿ ನಿರ್ದೇಶನಾಲಯದ ಜಾಗೃತ ಅಧಿಕಾರಿ ಆದೇಶ ಹೊರಡಿಸಿ ತನಿಖೆ ನಡೆಸಿ ೩೦ ದಿನಗಳೊಳಗೆ ವರದಿ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆಯ ಮೈಸೂರು ವಿಭಾಗೀಯ ಅಧಿಕಾರಿಗೆ ಆದೇಶಿಸಿದ್ದಾರೆ.