ಸಾರಾಂಶ
ಮದ್ದೂರು ತಾಲೂಕಿಗೆ 6210 ಮೆಟ್ರಿಕ್ ಟನ್ ಸರಬರಾಜಾಗಿದೆ. ಪ್ರಸ್ತುತ 3181.27 ಮೆಟ್ರಿಕ್ ಟನ್ ದಾಸ್ತಾನಿದೆ. ಹೀಗಾಗಿ ಯಾವುದೇ ರೀತಿಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ಮಾರಾಟಗಾರರು ಗೊಬ್ಬರದ ಕೃತಕ ಅಭಾವ, ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ರೀತ್ಯ ಮೊಕದ್ದಮ್ಮೆ ಹೂಡುವ ಜೊತೆಗೆ ಪರವಾನಗಿ ರದ್ದು ಪಡಿಸಲಾಗುವುದು.
ಕನ್ನಡಪ್ರಭ ವಾರ್ತೆ ಮದ್ದೂರು
ರಸಗೊಬ್ಬರಗಳ ಕೃತಕ ಅಭಾವ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುವ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಎಚ್ಚರಿಕೆ ನೀಡಿದರು.ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ತಾಲೂಕಿನ ರಸಗೊಬ್ಬರ ಮಾರಾಟಗಾರರ, ವಿತರಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿಗೆ 6210 ಮೆಟ್ರಿಕ್ ಟನ್ ಸರಬರಾಜಾಗಿದೆ. ಪ್ರಸ್ತುತ 3181.27 ಮೆಟ್ರಿಕ್ ಟನ್ ದಾಸ್ತಾನಿದೆ. ಹೀಗಾಗಿ ಯಾವುದೇ ರೀತಿಯಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದರು.
ರಸಗೊಬ್ಬರ ಮಾರಾಟಗಾರರು ಗೊಬ್ಬರದ ಕೃತಕ ಅಭಾವ ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ರೀತ್ಯ ಮೊಕದ್ದಮ್ಮೆ ಹೂಡುವ ಜೊತೆಗೆ ಪರವಾನಗಿ ರದ್ದು ಪಡಿಸಲಾಗುವುದು ಎಂದರು.ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ರಸಗೊಬ್ಬರ ಮಾರಾಟಗಾರರು ದಾಸ್ತಾನು ಪ್ರಮಾಣ ಮತ್ತು ಮಳಿಗೆಯ ಮುಂದೆ ದರಪಟ್ಟಿ ಪ್ರದರ್ಶನ ಮಾಡಬೇಕು. ಅಲ್ಲದೇ, ಯೂರಿಯಾ ಗೊಬ್ಬರದ ಕೃತಕ ಭಾವ ಸೃಷ್ಟಿಸಬಾರದು. ಪ್ರಸ್ತುತ ದಾಸ್ತಾನು, ಮಾರಾಟ ಮತ್ತು ಉಳಿದ ದಾಸ್ತಾನು ವರದಿಯನ್ನು ಕೃಷಿ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸುವಂತೆ ತಾಕೀತು ಮಾಡಿದರು.
ರೈತರು ಸಹ ಮುಂದಿನ ದಿನಗಳಲ್ಲಿ ರಸಗೊಬ್ಬರ ಕೊರತೆಯಾಗುತ್ತದೆ ಎಂಬ ಉದ್ದೇಶದಿಂದ ಮನೆಯಲ್ಲಿ ದಾಸ್ತಾನು ಮಾಡುವ ಪ್ರವೃತ್ತಿ ಕೈ ಬಿಡಬೇಕು. ತಾಲೂಕಿನ ಯಾವುದೇ ಹೋಬಳಿ ಕೇಂದ್ರಗಳಲ್ಲಿರುವ ರಸಗೊಬ್ಬರ ಮಾರಾಟದ ಅಂಗಡಿಗಳಿಗೆ ನಾನು ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳ ತಂಡ ಯಾವುದೇ ಸಂದರ್ಭದಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲನೆ ಈ ವೇಳೆ ಯಾವುದೇ ನ್ಯೂನ್ಯತೆಗಳು ಕಂಡು ಬಂದಲ್ಲಿ ಅಂಥವರ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.ಉಪ ಕೃಷಿ ನಿರ್ದೇಶಕ ಆರ್.ಮುನೇಗೌಡ ಮಾತನಾಡಿ, ಮಾರಾಟಗಾರರು ವಿವಿಧ ರಸಗೊಬ್ಬರಗಳಿಗೆ ಸಂಬಂಧಪಟ್ಟ ಸಂಸ್ಥೆಯಿಂದ ಒ ಫಾರಂ ಪಡೆದು ಪ್ರಾಧಿಕಾರದಿಂದ ಲೈಸೆನ್ಸ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿದ ನಂತರವೇ ರೈತರಿಗೆ ರಸಗೊಬ್ಬರ ಮಾರಾಟ ಮಾಡಬೇಕು ಎಂದರು.
ಈ ವೇಳೆ ಸಹಾಯಕ ಕೃಷಿ ನಿರ್ದೇಶಕಿ ಎಚ್.ಜಿ.ಪ್ರತಿಭಾ, ಮಂಡ್ಯ ವಿ.ಸಿ.ಫಾರ್ಮ್ ನ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ, ರೇಷ್ಮೆ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಸುರೇಶ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ, ಪೊಲೀಸ್ ವೃತ ನಿರೀಕ್ಷಕ ವೆಂಕಟೇಗೌಡ, ಸಬ್ ಇನ್ಸ್ ಪೆಕ್ಟರ್ ಮಂಜುನಾಥ್, ಕೃಷಿ ತಾಂತ್ರಿಕ ಅಧಿಕಾರಿ ದಯಾನಂದ್, ಕೃಷಿ ಅಧಿಕಾರಿಗಳಾದ ರೂಪಶ್ರೀ, ಕರುಣಾ, ಗವಾಸ್ಕರ್ ಮತ್ತಿತರರು ಇದ್ದರು.