ಲಾರಿ, ಕಾರಿನ ನಡುವೆ ಅಪಘಾತ: ಮಹಿಳೆ ಸಾವು

| N/A | Published : Aug 12 2025, 12:30 AM IST / Updated: Aug 12 2025, 10:14 AM IST

ಸಾರಾಂಶ

ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಮಹಿಳೆ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಗುಳಘಟ್ಟ ಗೇಟ್ ಬಳಿ ಸೋಮವಾರ ಮುಂಜಾನೆ ಸಂಭವಿಸಿದೆ. ಮದ್ದೂರು ತಾಲೂಕಿನ ಮಣಿಗೆರೆ ಗ್ರಾಮದ ಲೇ.ಮಲ್ಲಯ್ಯರ ಪತ್ನಿ ನಿಂಗಮ್ಮ ಸಾವನ್ನಪ್ಪಿದ ದುರ್ದೈವಿ.

 ಮಳವಳ್ಳಿ : ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಳಘಟ್ಟ ಗೇಟ್ ಬಳಿ ಸೋಮವಾರ ಮುಂಜಾನೆ ಸಂಭವಿಸಿದೆ.

ಮದ್ದೂರು ತಾಲೂಕಿನ ಮಣಿಗೆರೆ ಗ್ರಾಮದ ಲೇ.ಮಲ್ಲಯ್ಯರ ಪತ್ನಿ ನಿಂಗಮ್ಮ (65) ಸಾವನ್ನಪ್ಪಿದ ದುರ್ದೈವಿ. ಬೆಂಗಳೂರಿನಿಂದ ಮಳವಳ್ಳಿ ಮಾರ್ಗವಾಗಿ ಚಾಮರಾಜನಗರ ಜಿಲ್ಲೆಗೆ ದಿನಪತ್ರಿಕೆ ಸಾಗಿಸುತ್ತಿದ್ದ ಕಾರಿನಲ್ಲಿ ನಿಂಗಮ್ಮ ಸೊಪ್ಪು ತರಕಾರಿ ತರಲು ಮಣಿಗೆರೆಯಿಂದ ಮಳವಳ್ಳಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಗುಳಘಟ್ಟ ಗೇಟ್ ಬಳಿ ಸಿಮೆಂಟ್ ಲಾರಿಯೊಂದು ತಿರುವು ತೆಗೆದುಕೊಳ್ಳಲು ಏಕಾಏಕಿ ಮುಖ್ಯ ರಸ್ತೆಗೆ ಹಿಮ್ಮುಖವಾಗಿ ಚಲಿಸುತ್ತಿದ್ದ ವೇಳೆ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಅಪಘಾತಕ್ಕೆ ಕಾರು ನಾಲ್ಕೈದು ಬಾರಿ ರಸ್ತೆಗೆ ಪಲ್ಟಿ ಹೊಡೆದಿದೆ. ಕಾರಿನ ಎಡಬದಿಯಲ್ಲೇ ಕುಳಿತ್ತಿದ್ದ ನಿಂಗಮ್ಮ ಅವರ ತಲೆ ಮುಖ ಕಾರಿನ ಡಿಕ್ಕಿಗೆ ರಭಸವಾಗಿ ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ.

ಘಟನಾ ಸ್ಥಳಕ್ಕೆ ಇನ್ಸ್ ಪೆಕ್ಟರ್ ಬಿ.ಜಿ.ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಾರಿಗೆ ಬಸ್‌ಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಮಂಡ್ಯ:  ನಿಯಂತ್ರಣ ತಪ್ಪಿದ ಬೈಕ್ ಎದುರಿನಿಂದ ಬಂದ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಡಿಗೇನಹಳ್ಳಿ ಬಳಿ ನಡೆದಿದೆ.

ತಾಲೂಕಿನ ಹುನಗನಹಳ್ಳಿ ಗುಂಡ (30) ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ. ಮಂಡ್ಯ ಕಡೆಯಿಂದ ತನ್ನ ಗ್ರಾಮಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ನಾಗಮಂಗಲ ಕಡೆಯಿಂದ ಬರುತ್ತಿದ್ದ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಿಂದಾಗಿ ಆತನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Read more Articles on