9 ವರ್ಷಗಳಿಂದ ಕೋರ್ಟ್‌ಗೆ ಹಾಜರಾಗದ ಆರೋಪಿ ಸೆರೆ

| Published : May 04 2024, 01:31 AM IST / Updated: May 04 2024, 04:38 AM IST

WOMAN ARREST

ಸಾರಾಂಶ

ಅಪಹರಣ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಬರೋಬ್ಬರಿ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು: ಅಪಹರಣ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಬರೋಬ್ಬರಿ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅವಲಹಳ್ಳಿಯ ತೌಸಿಫ್‌ ಅಲಿಖಾನ್(33) ಬಂಧಿತ. ಆರೋಪಿಯು 2011ನೇ ಸಾಲಿನಲ್ಲಿ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದ. ಬಳಿಕ ಜಾಮೀನು ಪಡೆದು ಹೊರಗೆ ಬಂದ ಬಳಿಕ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಆರೋಪಿಯ ಬಂಧನಕ್ಕೆ ವಾರೆಂಟ್‌ ಜಾರಿ ಮಾಡಿತ್ತು.

ಈ ನಡುವೆ ಆರೋಪಿಯ ಬಂಧನಕ್ಕೆ ಬಸವನಗುಡಿ ಠಾಣೆ ಇನ್ಸ್‌ಪೆಕ್ಟರ್‌ ಸವಿತಾ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಆರೋಪಿ ತೌಸಿಫ್‌ ಅಲಿಖಾನ್‌ ಕೆ.ಆರ್‌.ಪುರ ಸಮೀಪದ ಅವಲಹಳ್ಳಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ರೌಡಿ ಸೆರೆಕನ್ನಡಪ್ರಭ ವಾರ್ತೆ ಬೆಂಗಳೂರುಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 6 ತಿಂಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್‌ನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಯೋಗೇಶ್‌ ಅಲಿಯಾಸ್‌ ಟಾಟಾ ಕಿರಣ್‌(27) ಬಂಧಿತ ರೌಡಿ ಶೀಟರ್‌. ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಯು ಜಾಮೀನು ಪಡೆದು ಹೊರಗೆ ಬಂದು ಕಳೆದ ಆರು ತಿಂಗಳಿಂದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಸಂಬಂಧ ನ್ಯಾಯಾಲಯವು ಬಂಧನ ವಾರೆಂಟ್‌ ಹೊರಡಿಸಿತ್ತು. ಇದರ ಬೆನ್ನಲ್ಲೇ ಗಿರಿನಗರ ಠಾಣೆ ಪೊಲೀಸರು ಆರೋಪಿಯು ಕನಕಪುರದ ದೊಡ್ಡ ಆಲನಹಳ್ಳಿಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಆತನನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.