ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.ಮೈಸೂರು ತಾಲೂಕು ಸಿದ್ದಲಿಂಗಪುರದ ನಿವಾಸಿ, ಬಸ್ ಕ್ಲೀನರ್ ಕಾರ್ತಿಕ್ (31) ಬಂಧಿತ ಆರೋಪಿ. ಈತನು ಬಾಲಕಿಯನ್ನು ಮಲಗಿದ್ದ ಸ್ಥಳದಿಂದ ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಆರೋಪಿಯನ್ನು ಕೊಳ್ಳೇಗಾಲದಿಂದ ಕರೆದುಕೊಂಡು ಬರುತ್ತಿದ್ದ ವೇಳೆ ಸಿದ್ದಲಿಂಗಪುರ ಅಂತ ಹೇಳಿದ್ದ. ಅಲ್ಲಿಗೆ ಹೋಗಿ ವಾಪಸ್ ಬರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಬಾಟಲ್ ಮೂಲಕ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ್ದ, ಇಬ್ಬರು ಪೊಲೀಸರಿಗೆ ಗಾಯವಾಗಿದೆ. ಈ ವೇಳೆ ನಮ್ಮವರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಆರೋಪಿ ಓಡಲು ಶುರು ಮಾಡಿದ ಆಗ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದರು.ಆರೋಪಿ ವಿರುದ್ಧ ಈ ಹಿಂದೆ ಗಲಾಟೆ ಮತ್ತು ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಎರಡು ಪ್ರಕರಣಗಳು ದಾಖಲಾಗಿದೆ. ಮೂರು ತಿಂಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ. ಮಗು ಮಲಗಿದ್ದ ವೇಳೆ ಎತ್ತಿಕೊಂಡು ಹೋಗಿ ಕೃತ್ಯ ಎಸಗಿದ್ದಾನೆ. ಆತ ಮಾದಕ ವ್ಯಸನಿ ಅಂತಲೂ ಗೊತ್ತಾಗಿದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ಗಿಲ್ಕಿ ವೆಂಕಟೇಶ್ ಕೊಲೆ- 6 ಮಂದಿ ಬಂಧನ:ಹಾಡುಹಗಲೇ ಗಿಲ್ಕಿ ವೆಂಕಟೇಶ್ ಹತ್ಯೆ ಪ್ರಕರಣದಲ್ಲಿ 6 ಜನರು ಭಾಗಿಯಾಗಿದ್ದಾರೆ. ಈಗಾಗಲೇ ಅವರನ್ನು ಅರೆಸ್ಟ್ ಮಾಡಿದ್ದೇವೆ. ಆರೋಪಿಗಳ ಪೈಕಿ 5 ಜನ ಮೈಸೂರಿನವರು ಮತ್ತು ಒಬ್ಬ ಮಂಡ್ಯದವ. ಹಾಲಪ್ಪ ಹಾಗೂ ಮೃತ ವೆಂಕಟೇಶ್ ನಡುವೆ ಶೀಥಲ ಸಮರವಿತ್ತು. ಒಂದೇ ಗ್ರೂಪ್ ಆದರೂ ನಾನಾ- ನೀನಾ ಎನ್ನುವ ವಿಚಾರಕ್ಕೆ ಕೊಲೆ ಆಗಿದೆ. ಈ ಹಿಂದೆ ನಡೆದ ಕಾರ್ತಿಕ್ ಕೊಲೆಗೂ ಇದಕ್ಕೂ ಲಿಂಕ್ ಇದಿಯಾ ಅಂತ ಪರಿಶೀಲಿಸುತ್ತಿದ್ದೇವೆ. ವೆಂಕಟೇಶ್ ಸಣ್ಣಪುಟ್ಟ ಫೈನಾನ್ಸ್ ಮಾಡುತ್ತಿದ್ದ ಅಂತ ಗೊತ್ತಾಗಿದೆ ಎಂದು ಅವರು ತಿಳಿಸಿದರು.
ಬಾಲಕಿ ಅತ್ಯಾಚಾರ, ಕೊಲೆ: ವಿವಿಧ ಸಂಘಟನೆಗಳು ಖಂಡನೆಕನ್ನಡಪ್ರಭ ವಾರ್ತೆ ಮೈಸೂರು
ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆಯು ನಿಜಕ್ಕೂ ಆಘಾತಕಾರಿಯಾಗಿದೆ. ಬಾಲಕಿಯ ಕೊಲೆ ಮತ್ತು ಅತ್ಯಾಚಾರದ ಕುರಿತು ಶೀಘ್ರ ಮತ್ತು ಸಮಗ್ರ ತನಿಖೆ ನಡೆಸಬೇಕು. ಅಪರಾಧಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಮೃತ ಬಾಲಕಿಯ ಪೋಷಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಆಸಿಯಾ ಬೇಗಂ ಆಗ್ರಹಿಸಿದ್ದಾರೆ.ದೊಡ್ಡಕೆರೆ ಮೈದಾನ ಸಮೀಪದಲ್ಲಿ 10 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಕೃತ್ಯವನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ತೀವ್ರವಾಗಿ ಖಂಡಿಸಿದ್ದು, ಬಾಲಕಿ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡುವುದರ ಜೊತೆಗೆ ಕೃತ್ಯದಲ್ಲಿ ಭಾಗಿಯಾದ ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ದಸರಾದಲ್ಲಿ ಹೊಟ್ಟೆಪಾಡಿಗಾಗಿ ಬಲೂನ್ ಮಾರಲು ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ, ಕೊಲೆಯನ್ನು ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ನಿತಿನ್ ಅತ್ಯುಗ್ರವಾಗಿ ಖಂಡಿಸಿದ್ದಾರೆ.ಅಪರಾಧಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತ ಬಡ ಬೀದಿ ಬದಿ ವ್ಯಾಪಾರಿಗಳಿಗೆ ದಸರಾ ಸಂದರ್ಭದಲ್ಲಿ ಸೂಕ್ತ ಭದ್ರತೆಯೊಂದಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದಸರಾ ವಸ್ತುಪ್ರದರ್ಶನ ಹತ್ತಿರ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಸರ್ಕಾರ ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ಭದ್ರತೆ ಮತ್ತು ಪರಿಹಾರ ನೀಡಬೇಕು. ಈ ನೀಚ ಕೃತ್ಯ ಎಸಗಿರುವವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.