ಆಸ್ತಿಗಾಗಿ ಆ್ಯಸಿಡ್ ದಾಳಿ; ತಂದೆ, ಒಡಹುಟ್ಟಿದವರ ವಿರುದ್ಧ ದೂರು

| Published : Mar 30 2024, 01:15 AM IST

ಆಸ್ತಿಗಾಗಿ ಆ್ಯಸಿಡ್ ದಾಳಿ; ತಂದೆ, ಒಡಹುಟ್ಟಿದವರ ವಿರುದ್ಧ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ತಿ ವಿವಾದದ ಹಿನ್ನಲೆಯಲ್ಲಿ ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ ಎಂದು ತಂದೆ ಹಾಗೂ ಒಡಹುಟ್ಟಿದವರ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಸ್ತಿ ವಿವಾದದ ಹಿನ್ನಲೆಯಲ್ಲಿ ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ ಎಂದು ತಂದೆ ಹಾಗೂ ಒಡಹುಟ್ಟಿದವರ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

ಬಾಗಲಗುಂಟೆ ನಿವಾಸಿ ಕಿರಣ್ ದಾಳಿಗೊಳಗಾಗಿದ್ದು, ಸಂತ್ರಸ್ತ ನೀಡಿದ ದೂರಿನ ಮೇರೆಗೆ ಆತನ ತಂದೆ ರಾಮಕೃಷ್ಣಯ್ಯ, ಅಕ್ಕ ಕಲಾವತಿ ಹಾಗೂ ಅಣ್ಣ ಉಪೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ತಂದೆ ಮನೆಗೆ ಕಿರಣ್ ತೆರಳಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಅವರ ಎದೆ ಹಾಗೂ ಕಣ್ಣು ಭಾಗದಲ್ಲಿ ಸುಟ್ಟು ಗಾಯಗಳಾಗಿವೆ.

ಬಾಗಲಗುಂಟೆಯ 5ನೇ ಅಡ್ಡರಸ್ತೆಯಲ್ಲಿ ರಾಮಕೃಷ್ಣಯ್ಯ ಅವರಿಗೆ ಸೇರಿದ ಮನೆ ಇದ್ದು, ಈ ಮನೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಅಕ್ಕ ಕಲಾವತಿ ಹೊಂಚು ಹಾಕಿದ್ದಳು. ಕೆಲ ದಿನಗಳ ಹಿಂದೆ ತಮ್ಮ ತಾಯಿ ತಿಥಿ ಕಾರ್ಯನಿಮಿತ್ತ ಮನೆಗೆ ತೆರಳಿದ್ದಾಗ ಆಸ್ತಿ ಪ್ರಸ್ತಾಪ ಮಾಡಿ ಗಲಾಟೆ ಮಾಡಿದ್ದರು. ನನ್ನನ್ನು ಥಳಿಸಿದಲ್ಲದೆ ಆ್ಯಸಿಡ್ ಸಹ ಹಾಕಿದ್ದರು ಎಂದು ಕಿರಣ್ ಆರೋಪಿಸಿದ್ದಾರೆ.

- - -

ಚಪ್ಪಲಿ, ಶೂ ಕಳ್ಳ ಎಸ್ಕೇಪ್!ಕನ್ನಡಪ್ರಭ ವಾರ್ತೆ ಬೆಂಗಳೂರು ತನ್ನ ಸೆರೆ ಹಿಡಿಯಲು ಬಂದ ಅಪಾರ್ಟ್‌ಮೆಂಟ್ ನಿವಾಸಿಗಳಿಂದ ಕಳ್ಳನೊಬ್ಬ ತಪ್ಪಿಸಿಕೊಂಡಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ನಸುಕಿನಲ್ಲಿ ಪಣತ್ತೂರು ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಕಿಡಿಗೇಡಿ ಕಳ್ಳತನಕ್ಕೆ ಯತ್ನಿಸಿದ್ದ. ಆಗ ಆತನನ್ನು ಹಿಡಿಯಲು ಸ್ಥಳೀಯರು ಮುಂದಾದಾಗ ಕಾಂಪೌಂಡ್ ಜಿಗಿದು ತಪ್ಪಿಸಿಕೊಂಡಿದ್ದಾನೆ. ಈ ಬಗ್ಗೆ ಬೆಳ್ಳಂದೂರು ಠಾಣೆಗೆ ಅಪಾರ್ಟ್‌ಮೆಂಟ್ ನಿವಾಸಿಗಳು ದೂರು ನೀಡಿದ್ದಾರೆ.ಇತ್ತೀಚಿಗೆ ಅಪಾರ್ಟ್‌ಮೆಂಟ್‌ನಲ್ಲಿ ಚಪ್ಪಲಿ ಹಾಗೂ ಶೂಗಳು ಸೇರಿದಂತೆ ಕೆಲವು ವಸ್ತುಗಳು ಕಳ್ಳತನವಾಗುತ್ತಿದ್ದವು. ಕಾವಲುಗಾರ ಕಣ್ತಪ್ಪಿಸಿ ಒಳ ನುಸುಳುತ್ತಿದ್ದ ಕಿಡಿಗೇಡಿ, ಬಳಿಕ ಫ್ಲ್ಯಾಟ್‌ಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ. ಈ ಹಿನ್ನಲೆಯಲ್ಲಿ ಕಳ್ಳನ ಸೆರೆ ಹಿಡಿಯಲು ಅಪಾರ್ಟ್‌ಮೆಂಟ್‌ ನಿವಾಸಿಗಳು ಎಚ್ಚರಿಕೆ ವಹಿಸಿದ್ದರು. ಅಂತೆಯೇ ಮಾ.27 ರಂದು ನಸುಕಿನಲ್ಲಿ ಕಾವಲುಗಾರನ ಕಣ್ತಪ್ಪಿಸಿ ನುಗ್ಗಿದ ಕಿಡಿಗೇಡಿ ಹಿಡಿಯಲು ಅಪಾರ್ಟ್‌ಮೆಂಟ್‌ ನಿವಾಸಿಗಳು ಮುಂದಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.