ಸಾರಾಂಶ
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮೈದಾನದ ಪ್ರವೇಶ ದ್ವಾರದ ಕಬ್ಬಿಣದ ಗೇಟ್ ತೆಗೆಯಲು ಯತ್ನಿಸಿದಾಗ ಆಕಸ್ಮಿಕವಾಗಿ ಕಳಚಿ ಬಿದ್ದು 11 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಮಲ್ಲೇಶ್ವರದಲ್ಲಿ ಭಾನುವಾರ ನಡೆದಿದೆ.
ಪ್ಯಾಲೆಸ್ ಗುಟ್ಟಹಳ್ಳಿಯ ವಿವೇಕಾನಂದ ಬ್ಲಾಕ್‌ನ ನಿವಾಸಿ ವಿಜಯ್ ಪವಾರ್ ದಂಪತಿ ಪುತ್ರ ನಿರಂಜನ್ (11) ಮೃತ ದುರ್ದೈವಿ. ಮನೆ ಸಮೀಪದ ಬಿಬಿಎಂಪಿಯ ರಾಜಾಶಂಕರ್ ಮೈದಾನದಲ್ಲಿ ಆಟವಾಡಲು ಭಾನುವಾರ ಸಂಜೆ ಆತ ತೆರಳಿದ್ದಾನೆ. ಆ ವೇಳೆ ಮೈದಾನದ ಪ್ರವೇಶ ದ್ವಾರದ ಗೇಟ್ ಅನ್ನು ನಿರಂಜನ್ ತೆರೆಯಲು ಯತ್ನಿಸಿದಾಗ ತಕ್ಷಣವೇ ಗೇಟ್ ಕಳಚಿ ಆತನ ಮೇಲೆ ಬಿದ್ದಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಕೊನೆಯುಸಿರೆಳೆದಿದ್ದಾನೆ.
ಮೃತ ನಿರಂಜನ್ ಮಲ್ಲೇಶ್ವರದ ಬಿಜೆಪಿ ಕಚೇರಿ ಸಮೀಪದ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದ. ಪ್ರತಿ ದಿನ ಮನೆ ಸಮೀಪದ ಮೈದಾನಕ್ಕೆ ತನ್ನ ಸ್ನೇಹಿತರ ಜತೆ ಆಟವಾಡಲು ಆತ ತೆರಳುತ್ತಿದ್ದ. ಎಂದಿನಂತೆ ಭಾನುವಾರ ಸಂಜೆ ಕೂಡ ಮೈದಾನದಲ್ಲಿ ಆಟವಾಡಲು ನಿರಂಜನ್ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.