ಮನೆ ಬಾಡಿಗೆ ವಿಚಾರಕ್ಕೆ ಜಗಳ : ಇರಿದು ಸಾಕು ಮಗನ ಕೊಂದ

| Published : Jun 25 2024, 12:32 AM IST / Updated: Jun 25 2024, 04:45 AM IST

ಸಾರಾಂಶ

ಮನೆ ಬಾಡಿಗೆ ಕಟ್ಟುವ ವಿಚಾರಕ್ಕೆ ಸಾಕುಮಗನೊಂದಿಗೆ ತಂದೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಮನೆ ಬಾಡಿಗೆ ಕಟ್ಟುವ ವಿಚಾರಕ್ಕೆ ಸಾಕುಮಗನೊಂದಿಗೆ ತಂದೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜ್ಞಾನಭಾರತಿಯ ದೊಡ್ಡಗೊಲ್ಲರಹಟ್ಟಿ ನಿವಾಸಿ ಆನಂದ್ (37) ಕೊಲೆಯಾದ ದುರ್ದೈವಿ. ಭಾನುವಾರ ರಾತ್ರಿ ಸುಮಾರು 10.30ಕ್ಕೆ ಈ ಘಟನೆ ನಡೆದಿದೆ. ಈ ಸಂಬಂಧ ಮೃತನ ಸಾಕು ತಂದೆ ಪುಟ್ಟಸ್ವಾಮಿ(70) ಎಂಬುವವರನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿ ಪುಟ್ಟಸ್ವಾಮಿಗೆ ಆನಂದ್‌ ಸಾಕು ಮಗ. ಆನಂದ್‌ ಪೇಂಟಿಂಗ್‌ ಕೆಲಸ ಮಾಡಿಕೊಂಡಿದ್ದ. ನಿತ್ಯ ಮದ್ಯ ಸೇವಿಸುತ್ತಿದ್ದ ಪುಟ್ಟಸ್ವಾಮಿ ಕೌಟುಂಬಿಕ ವಿಚಾರಕ್ಕೆ ಸಾಕು ಮಗ ಆನಂದ್ ಜತೆಗೆ ಆಗಾಗ ಗಲಾಟೆ ಮಾಡುತ್ತಿದ್ದ. ಮನೆಯ ಬಾಡಿಗೆ ಕಟ್ಟುವ ವಿಚಾರಕ್ಕೆ ಭಾನುವಾರ ರಾತ್ರಿ ತಂದೆ-ಮಗನ ನಡುವೆ ಜಗಳ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪುಟ್ಟಸ್ವಾಮಿ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದು ಆನಂದ್‌ನ ಎದೆ ಮತ್ತು ಹೊಟ್ಟೆಗೆ ಇರಿಸಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವಾಗಿ ಆನಂದ್‌ ಕುಸಿದು ಬಿದ್ದಿದ್ದಾನೆ. ಗಲಾಟೆ ಸದ್ದು ಕೇಳಿ ಅಕ್ಕಪಕ್ಕದ ನಿವಾಸಿಗಳು ಓಡಿ ಬಂದು ನೋಡಿದಾಗ ಆನಂದ್‌ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪುಟ್ಟಸ್ವಾಮಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.