ಸಾರಾಂಶ
ಬೆಂಗಳೂರು : ಹಳೇ ಪ್ರಕರಣಗಳಲ್ಲಿ ವಿಚಾರಣೆಗೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ರೌಡಿಗಳನ್ನು ಜೆ.ಬಿ.ನಗರ ಹಾಗೂ ಬನಶಂಕರಿ ಠಾಣೆ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿದ್ದಾರೆ. ಜೆ.ಬಿ.ನಗರದ ಧನುಷ್ ಅಲಿಯಾಸ್ ಚೊಟ್ಟೆ ಹಾಗೂ ಅಮೃತ್‌ನಗರ ಸಮೀಪದ ಕುಲುಮೆಪಾಳ್ಯದ ಶುಹೇಬ್ ಖಾನ್ ಬಂಧಿತ ಆರೋಪಿಗಳು. ಈ ಇಬ್ಬರ ವಿರುದ್ಧ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿತ್ತು. ಈ ಹಿನ್ನೆಲೆ ರೌಡಿಗಳನ್ನು ಪತ್ತೆ ಹಚ್ಚಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. 2 ವರ್ಷಗಳಿಂದ ತಮಿಳುನಾಡಿನಲ್ಲಿ ರೌಡಿ ಧನುಷ್ ತಲೆಮರೆಸಿಕೊಂಡಿದ್ದರೆ, ಮೂರು ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ಖಾನ್ ಅಜ್ಞಾತವಾಸಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮೊಬೈಲ್ ಕಳ್ಳರ ಸೆರೆ
ಬೆಂಗಳೂರು : ಇತ್ತೀಚಿಗೆ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಮೊಬೈಲ್ ದೋಚಿದ್ದ ಮೂವರು ಕಿಡಿಗೇಡಿಗಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಚ್‌ಎಎಲ್‌ನ ಮಂಜುನಾಥ್, ಸರ್ಜಾಪುರದ ಎನ್.ಕಾರ್ತಿಕ್ ಹಾಗೂ ಬಸವನಗರದ ಆರ್.ಕಾರ್ತಿಕ್ ಎಂಬ ಆರೋಪಿಗಳನ್ನು ಬಂಧಿಸಿದ್ದು, 1.25 ಲಕ್ಷ ರು ಮೌಲ್ಯದ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಗುಂಜೂರು ಪಾಳ್ಯದ ಬಾರ್‌ನಲ್ಲಿ ಮದ್ಯ ಸೇವಿಸಿ ಆರೋಪಿಗಳು ಹೊರ ಬಂದಿದ್ದಾರೆ. ಅದೇ ವೇಳೆ ಅವರ ಬೈಕ್ ಪಕ್ಕದಲ್ಲಿ ನಿಲ್ಲಿಸಿದ್ದ ತಮ್ಮ ಬೈಕ್ ಅನ್ನು ಸಂತ್ರಸ್ತ ತೆಗೆಯುತ್ತಿದ್ದರು. ಆಗ ಆರೋಪಿಗಳಿಗೆ ಬೈಕ್ ತಾಕಿದೆ. ಇದರಿಂದ ಕೋಪಗೊಂಡು ಸಂತ್ರಸ್ತನ ಮೇಲೆ ಹಲ್ಲೆ ನಡೆಸಿ ಮೊಬೈಲ್ ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.