ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡ ಮೊಬೈಲ್ ವ್ಯಾಪಾರಿ ದರೋಡೆ ಎಂದು ಬಿಂಬಿಸಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಅಪರೂಪದ ಘಟನೆ ಪಟ್ಟಣದಲ್ಲಿ ಮಂಗಳವಾರ ಮುಂಜಾನೆ ಜರುಗಿದೆ.ರಾಮನಗರ ಜಿಲ್ಲೆಯ ಚನ್ನಪಟ್ಟಣದ ಈಡಿಗರ ರಸ್ತೆಯ ಸೈಯದ್ ಮುಸ್ತಾಪ್ ಅಹಮದ್ ಪುತ್ರ ಸೈಯದ್ ಯಾಮಿನ್ (24) ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
ಮೊಬೈಲ್ ವ್ಯಾಪಾರಿಯಾದ ಸೈಯದ್ ಪ್ರತಿಷ್ಠಿತ ಕಂಪನಿಗಳ ಮೊಬೈಲ್‌ಗಳನ್ನು ಮೈಸೂರಿನ ಮೊಬೈಲ್ ವ್ಯಾಪಾರಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವ ವೃತ್ತಿ ನಡೆಸುತ್ತಿದ್ದನು ಎಂದು ಹೇಳಲಾಗಿದೆ.ಕಡಿಮೆ ದರದಲ್ಲಿ ಮೊಬೈಲ್ ಮಾರಾಟ ಮಾಡುತ್ತಿದ್ದ ಈತನಿಗೆ ವ್ಯಾಪಾರದಲ್ಲಿ ಲಕ್ಷಾಂತರ ರು. ನಷ್ಟ ಉಂಟಾಗಿತ್ತು. ಅಲ್ಲದೇ, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಸಹ ಹಣ ಕಳೆದುಕೊಂಡಿದ್ದ ಸೈಯದ್ ತನ್ನ ತಾಯಿಯಿಂದ ಒಂದು ಲಕ್ಷ ರು. ಸಾಲ ಪಡೆದಿದ್ದನು. ಅಲ್ಲದೇ, ತನ್ನ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಗಳ ಮೂಲಕ ಸಾಲ ಪಡೆದಿದ್ದ ಈತ ದರೋಡೆ ನೆಪದಲ್ಲಿ ಹಣ ಕಳೆದುಕೊಂಡಿದ್ದೇನೆ ಎಂದು ಬಿಂಬಿಸಲು ಸಂಚು ರೂಪಿಸಿದ್ದನು.
ಅದರಂತೆ ಮಂಗಳವಾರ ಮುಂಜಾನೆ ಮೈಸೂರಿನಿಂದ ಚನ್ನಪಟ್ಟಣಕ್ಕೆ ತೆರುಳುವ ಮಾರ್ಗ ತನ್ನ ಕಾರು ನಿಲ್ಲಿಸಿ ಬ್ಲೇಡ್ ನಿಂದ ಕೈ ಮತ್ತು ದೇಹದ ಮುಂಭಾಗಗಳನ್ನು ಕತ್ತರಿಸಿ ಕೊಂಡ ಸೈಯದ್ ಯಾಮಿನ್ ಬೆಂಗಳೂರು ಮೈಸೂರು - ಹೆದ್ದಾರಿಯಲ್ಲಿ ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ತನ್ನ ಕಾರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಲ್ಲೆ ನಡೆಸಿ ಗಾಯಗೊಳಿಸಿದ ನಂತರ ತನ್ನ ಬಳಿ ಇದ್ದ 2.4 0 ಲಕ್ಷ ರು. ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಸೈಯದ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಹೆದ್ದಾರಿಗಸ್ತು ಪೊಲೀಸರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.ನಂತರ ಸ್ಥಳಕ್ಕೆ ಧಾವಿಸಿದ ಸಿಪಿಐ ಕೆ.ಆರ್.ಪ್ರಸಾದ್ ಸೈಯ್ಯದ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ದರೋಡೆ ನಡೆದಿರುವುದು ಸುಳ್ಳು. ಈತನೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಇಂತಹ ಕಥೆ ಕಟ್ಟಿದ್ದಾನೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಸೈಯದ್ ಯಾಮಿನ್ ನಿಂದ ಪೊಲೀಸರು ಮುಚ್ಚಳಿಕೆ ಬರೆಸಿ ಕೊಂಡ ನಂತರ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.