ಸಾರಾಂಶ
ಬೆಂಗಳೂರು : ಜಿಮ್ ತರಬೇತುದಾರ ಪ್ರಶಾಂತ್ ಪೂಜಾರಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನಟ ಧ್ರುವ ಸರ್ಜಾ ಅವರ ಮ್ಯಾನೇಜರ್ ಅಶ್ವಿನ್ ಅವರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೇ 26ರಂದು ಬನಶಂಕರಿ 2ನೇ ಹಂತದ ಕೆ.ಆರ್.ರಸ್ತೆಯಲ್ಲಿ ಜಿಮ್ ತರಬೇತುದಾರ ಪ್ರಶಾಂತ್ ಪೂಜಾರಿ ಮೇಲೆ ಇಬ್ಬರು ಅಪರಿಚಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ನಟ ಧ್ರುವ ಸರ್ಜಾ ಅವರ ಕಾರು ಚಾಲಕ ನಾಗೇಂದ್ರ, ಈತನ ಸ್ನೇಹಿತರಾದ ಹರ್ಷ ಹಾಗೂ ಸುಭಾಷ್ ಎಂಬುವವರನ್ನು ಬಂಧಿಸಿದ್ದಾರೆ.
ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆಸಲು ಸೂಚಿಸಿದ್ದ ಆರೋಪದಡಿ ಅಶ್ವಿನ್‌ನನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಮ್ ತರಬೇತುದಾರ ಪ್ರಶಾಂತ್ ಪೂಜಾರಿ, ನಟ ಧ್ರುವ ಸರ್ಜಾ ಜತೆಗೆ ಆಪ್ತರಾಗಿದ್ದರು. ಜತೆಗೆ ಧ್ರುವಗೆ ಜಿಮ್‌ನಲ್ಲಿ ತರಬೇತಿ ನೀಡುತ್ತಿದ್ದರು. ಈ ಆಪ್ತತೆ ಹಾಗೂ ಸ್ನೇಹವನ್ನು ಸಹಿಸದ ನಾಗೇಂದ್ರ ಮತ್ತು ಅಶ್ವಿನ್, ಪ್ರಶಾಂತ್ ಪೂಜಾರಿ ಮೇಲೆ ದ್ವೇಷ ಸಾಧಿಸುತ್ತಿದ್ದರು. ಹೀಗಾಗಿ ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಅವರನ್ನು ಮುಂದೆ ಬಿಟ್ಟು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿಸಿದ್ದರು ಎನ್ನಲಾಗಿದೆ. ಈ ಸಂಬಂಧ ದಾಖಲಾದ ದೂರಿನ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಸದ್ಯ ಅಶ್ವಿನ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾನೆ.