ಸಾರಾಂಶ
ಜಮೀನಿನ ವಿವಾದ ವಿಚಾರವಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದ ಯುವಕ ಠಾಣೆ ಎದುರೇ ಪೇದೆಗೆ ಹಲ್ಲೆ ನಡೆಸಿ ಪೊಲೀಸರ ಅತಿಥಿಯಾಗಿರುವ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಪಾಂಡವಪುರ : ಜಮೀನಿನ ವಿವಾದ ವಿಚಾರವಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದ ಯುವಕ ಠಾಣೆ ಎದುರೇ ಪೇದೆಗೆ ಹಲ್ಲೆ ನಡೆಸಿ ಪೊಲೀಸರ ಅತಿಥಿಯಾಗಿರುವ ಘಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷ ಜಗದೀಶ್ ಅವರ ಪುತ್ರ ಸಾಗರ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿರುವ ಯುವಕ.
ಪಟ್ಟಣದ ನಿವಾಸಿ ಲಕ್ಷ್ಮೀನಾರಾಯಣರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಾಗರ ಜಮೀನಿನ ಮಾಲೀಕ ಲಕ್ಷ್ಮೀನಾರಾಯಣ ಹಲ್ಲೆ ನಡೆಸಿದ್ದರು. ಈ ವಿಚಾರವಾಗಿ ಲಕ್ಷ್ಮೀನಾರಾಯಣ ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಕ್ಷ್ಮೀನಾರಾಯಣ ಹಾಗೂ ಸಾಗರ್ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಸಾಗರ್ ದೂರುದಾರ ಲಕ್ಷ್ಮೀನಾರಾಯಣ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾನೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸ್ ಪೇದೆ ಅಭಿಲಾಷ್ ಆರೋಪಿ ಸಾಗರ್‌ನನ್ನು ತಡೆಯಲು ಮುಂದಾದಾಗ ಸಾಗರ್ ಏಕಾಏಕಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸುತ್ತಾನೆ.
ಠಾಣೆ ಎದುರೇ ಪೇದೆಗೆ ಕಪಾಲ ಮೋಕ್ಷ ಮಾಡಿ ಪೇದೆ ಕುತ್ತಿಗೆ ಪಟ್ಟಿಗೆ ಕೈಹಾಕುತ್ತಾನೆ. ತಡೆಯಲು ಬಂದ ಮತ್ತೋರ್ವ ಪೊಲೀಸ್ ಪೇದೆಗೂ ಕುತ್ತಿಗೆ ಪಟ್ಟಿಗೆ ಕೈಹಾಕುವ ಮೂಲಕ ದರ್ಪ ಮೆರೆಯುತ್ತಾನೆ. ಸ್ಥಳದಲ್ಲಿಯೇ ಇದ್ದ ಇತರೆ ಪೊಲೀಸರು ಸಾಗರನ್ನು ಹಿಡಿದು ಠಾಣೆಗೆ ಒಳಗೆ ಕೂರಿಸುತ್ತಾರೆ.
ನಂತರ ಆರೋಪಿ ಸಾಗರ್ ಠಾಣೆಯಿಂದ ಏಕಾಏಕಿ ಪರಾರಿಯಾಗುತ್ತಾನೆ. ಪೊಲೀಸರು ಹಿಂಬಾಲಿ ಮತ್ತೆ ಸಾಗರನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿ ಸಾಗರ್ ವಿರುದ್ಧ ಪೊಲೀಸರ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.