ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಎಎಸ್‌ಐ ರಾಜು ಮೇಲೆ ವ್ಯಕ್ತಿಯಿಂದ ಹಲ್ಲೆ : ಪ್ರಕರಣ ದಾಖಲು

| Published : Jan 05 2025, 01:33 AM IST / Updated: Jan 05 2025, 05:46 AM IST

KSRP

ಸಾರಾಂಶ

ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ತನ್ನ ಸ್ವಂತ ಮಗ ಕೃಷ್ಣನ ವಿರುದ್ಧ ತಾಯಿ ಮರಿಯಮ್ಮ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಕೃಷ್ಣ ಠಾಣೆಗೆ ಹಾಜರಾಗಿರಲಿಲ್ಲ.

  ನಾಗಮಂಗಲ :  ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ವ್ಯಕ್ತಿ ಹಲ್ಲೆ ನಡೆಸಿರುವ ಘಟನೆ ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಎಎಸ್‌ಐ ರಾಜು ಹಲ್ಲೆಗೊಳಗಾದವರು. ತಾಲೂಕಿನ ಮಜ್ಜನಕೊಪ್ಪಲು ಗ್ರಾಮದ ಶಿವಲಿಂಗಯ್ಯನ ಮಗ ಕೃಷ್ಣ ಹಲ್ಲೆ ನಡೆಸಿದವನು.

ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ತನ್ನ ಸ್ವಂತ ಮಗ ಕೃಷ್ಣನ ವಿರುದ್ಧ ತಾಯಿ ಮರಿಯಮ್ಮ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಕೃಷ್ಣ ಠಾಣೆಗೆ ಹಾಜರಾಗಿರಲಿಲ್ಲ.

ಶನಿವಾರ ಮಧ್ಯಾಹ್ನ ಪಟ್ಟಣದ ಟಿ.ಬಿ.ಬಡಾವಣೆಯ ನ್ಯಾಯಾಲಯದ ಸಮೀಪದಲ್ಲಿ ಕೃಷ್ಣ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ ಎಎಸ್‌ಐ ರಾಜು ಆತನನ್ನು ಠಾಣೆಗೆ ಕರೆತರುವ ಸಲುವಾಗಿ ಹೋಗಿದ್ದ ವೇಳೆ ಈ ಕೃತ್ಯ ಎಸಗಿದ್ದಾನೆ.

ಘಟನೆ ಸಂಬಂಧ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಎಎಸ್‌ಐ ರಾಜು ದೂರು ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಅರ್ಜಿದಾರರಿಗೆ ಮಾಹಿತಿ ನೀಡಲು ವಿಳಂಬ, ಇಬ್ಬರಿಗೆ ತಲ 25 ಸಾವಿರ ದಂಡ

ನಾಗಮಂಗಲ:  ಮಾಹಿತಿ ಹಕ್ಕು ಅಧಿನಿಯಮದಡಿ ಕೋರಿದ್ದ ಮಾಹಿತಿ ನೀಡಲು ವಿಳಂಬ ಮತ್ತು ನಿರ್ಲಕ್ಷ್ಯ ಮಾಡಿದ ಕಾರಣಕ್ಕೆ ತಾಲೂಕಿನ ಲೋಕೋಪಯೋಗಿ ಇಲಾಖೆಯ ಇಬ್ಬರು ಅಭಿಯಂತರಿಗೆ ತಲಾ 25 ಸಾವಿರ ದಂಡ ವಿಧಿಸಿದ್ದಾರೆ. ಮಾಹಿತಿ ಕೋರಿದ್ದ ಅರ್ಜಿದಾರರಿಗೆ 15 ಸಾವಿರ ರು. ಪರಿಹಾರ ನೀಡಲು ರಾಜ್ಯ ಮಾಹಿತಿ ಹಕ್ಕು ಆಯೋಗ ಆದೇಶ ಮಾಡಿದೆ.

ಅರ್ಜಿದಾರ ಸದಾನಂದಗೌಡರು ತಾಲೂಕಿನ ಬಿಂಡಿಗನವಿಲೆ- ಹೊನ್ನಾವರ ಗ್ರಾಮದ ನಡೆಯುತ್ತಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಬಂಧಿಸಿದಂತೆ ವಿವಿಧ ಹಂತದ ಕಾಮಗಾರಿಯ ಅಂದಾಜು ಪಟ್ಟಿ ಸೇರಿ, ಗುತ್ತಿಗೆದಾರರು ಇತರೆ ಮಾಹಿತಿ ಕೋರಿದ್ದರು. ಶೋಕಾಸ್ ನೋಟಿಸ್, ಕೋರ್ಟ್ ನೋಟಿಸ್‌ಗೆ ಈ ಸಂಬಂಧ ಮಾಹಿತಿ ನೀಡಲು 2 ವರ್ಷ, 8 ತಿಂಗಳಾದರೂ ಮಾಹಿತಿ ನೀಡದೆ ವಿಳಂಬ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ.ಎಚ್.ಸಿ.ಸತ್ಯನ್‌ರವರು 2024ರ ಡಿ.14ರಂದು ಆದೇಶ ಹೊರಡಿಸಿ,

ನಾಗಮಂಗಲ ಲೋಕೋಪಯೋಗಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ನಂದಕುಮಾರ ಹಾಗೂ ಈ ಹಿಂದೆ ಇದೇ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಆಗಿದ್ದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹದೇವಪ್ಪ ಎಂಬುವರಿಗೆ ತಲಾ 25 ಸಾವಿರ ರು. ದಂಡ ವಿಧಿಸಿದ್ದಾರೆ.