ವಾಟರ್‌ಮ್ಯಾನ್ ಮೇಲೆ ಹಲ್ಲೆ: ಆರೋಪಿ ಬಂಧಿಸುವಂತೆ ದೂರು

| Published : Oct 07 2025, 01:02 AM IST

ವಾಟರ್‌ಮ್ಯಾನ್ ಮೇಲೆ ಹಲ್ಲೆ: ಆರೋಪಿ ಬಂಧಿಸುವಂತೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ನೀರು ಬಿಡುವ ವಿಚಾರಕ್ಕೆ ಗ್ರಾಮ ಪಂಚಾಯ್ತಿ ನೌಕರ ಸಿ.ಎಂ.ಶಿವರಾಜ್ ಮೇಲೆ ಮನಬಂದಂತೆ ಕಬ್ಬಿಣದ ರಾಣಡಿನಿಂದ ಹಲ್ಲೆ ಮಾಡಿರುವ ಎಸ್.ಎನ್. ಹರೀಶ್‌ನನ್ನು ಕೂಡಲೇ ಬಂಧಿಸಿ ನ್ಯಾಯ ಕೊಡಿಸಿಕೊಡಬೇಕೆಂದು ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ನೀರು ಬಿಡುವ ವಿಚಾರಕ್ಕೆ ಗ್ರಾಮ ಪಂಚಾಯ್ತಿ ನೌಕರ ಸಿ.ಎಂ.ಶಿವರಾಜ್ ಮೇಲೆ ಮನಬಂದಂತೆ ಕಬ್ಬಿಣದ ರಾಣಡಿನಿಂದ ಹಲ್ಲೆ ಮಾಡಿರುವ ಎಸ್.ಎನ್. ಹರೀಶ್‌ನನ್ನು ಕೂಡಲೇ ಬಂಧಿಸಿ ನ್ಯಾಯ ಕೊಡಿಸಿಕೊಡಬೇಕೆಂದು ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಮನವಿ ಮಾಡಿದ್ದಾರೆ.

ಅ.1ರ ಆಯುಧ ಪೂಜೆ ದಿನದಂದು ವಳಗೆರೆಹಳ್ಳಿ ಗ್ರಾಪಂ ವ್ಯಾಪ್ತಿಯ ಸೊಳ್ಳೆಪುರ ಗ್ರಾಮದಲ್ಲಿ ನೀರು ಬಿಡುವ ವಾಟರ್ ಮ್ಯಾನ್ ಸಿ.ಎಂ.ಶಿವರಾಜು ಅವರನ್ನು ಸೊಳ್ಳೆಪುರ ಗ್ರಾಮದ ನಾರಾಯಣಗೌಡರ ಪುತ್ರ ಎಸ್.ಎನ್.ಹರೀಶ್ ನೀರು ಬಿಡುವ ವಿಚಾರದಲ್ಲಿ ಏಕಾಏಕಿ ನೀರು ಬಿಡುವ ಕಬ್ಬಿಣದ ರಾಡಿನಿಂದ ಕೈ, ಬೆನ್ನು, ತೊಡೆ ಭಾಗದ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಲ್ಲದೆ, ಕೆಳಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದು, ತೀವ್ರ ಗಾಯಗೊಂಡು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ:

ಸೊಳ್ಳೆಪುರ ಗ್ರಾಮದಲ್ಲಿ ವಾಟರ್ ಮ್ಯಾನ್ ಆಗಿರುವ ಶಿವರಾಜು ಗ್ರಾಮದ ವಿವಿಧ ಬೀದಿಗಳಲ್ಲಿ ನೀರು ಬಿಟ್ಟಿದ್ದು, ಹರೀಶ್ ಅವರ ಬೀದಿಗೆ ನೀರು ಬಿಡುವ ಮುನ್ನವೇ ಸ್ವತಃ ಅವರೇ ತಮ್ಮ ಬೀದಿಗೆ ನೀರನ್ನು ಬಿಟ್ಟುಕೊಂಡಿದ್ದಾನೆ. ಇದನ್ನು ಕೇಳಲು ಹೋದ ವಾಟರ್ ಮ್ಯಾನ್ ಶಿವರಾಜುನನ್ನು ಅವಾಚ್ಯ ಪದಗಳಿಂದ ನಿಂದಿಸಿ ನೀರು ಬಿಡುವ ಕಬ್ಬಿಣದ ರಾಡನ್ನು ಕಿತ್ತುಕೊಂಡು ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ಇದನ್ನು ನೋಡಿದ ಗ್ರಾಮಸ್ಥರು ಗಲಾಟೆ ತಡೆದಿದ್ದಾರೆ. ಗ್ರಾಪಂ ಸದಸ್ಯ ಗಿರೀಶ್ ಅವರು ವಾಟರ್‌ಮ್ಯಾನ್ ಶಿವರಾಜು ಅವರನ್ನು ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ನಂತರ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಿ, ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ.

ಈ ಸಂಬಂಧ ಹಲ್ಲೆ ನಡೆಸಿರುವ ಹರೀಶ್ ಅವರ ಮೇಲೆ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಹಾಗೂ ವಾಟರ್‌ಮ್ಯಾನ್ ಶಿವರಾಜ್ ಅವರು ದೂರು ನೀಡಿ ಆರೋಪಿಯನ್ನು ಬಂಧಿಸಬೇಕೆಂದು ಮನವಿ ಮಾಡಿದ್ದಾರೆ. ಈ ಸಂಬಂಧ ಬೆಸಗರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.