ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಂದೆಯ ಮೇಲೆ ಹಲ್ಲೆ ನಡೆಸಿದನೆಂಬ ಕಾರಣಕ್ಕೆ ಇಬ್ಬರು ಮಕ್ಕಳು ಸೇರಿಕೊಂಡು ಚಿಕ್ಕಪ್ಪನನ್ನೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ತಾಲೂಕಿನ ಕೆರಗೋಡು ಹೋಬಳಿ ಬಿ.ಹೊಸೂರು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕು ಕೂಡ್ಲಗಿಯ ಬಿ.ಪಿ.ತಾಂಡ ನಿವಾಸಿ ಬಸೀರ್ ಸಾಬ್ (೩೦) ಕೊಲೆಯಾದ ವ್ಯಕ್ತಿ. ಈತನ ಅಣ್ಣನ ಮಕ್ಕಳಾದ ಅಲ್ಲಾ ಭಕ್ಷಾ, ಅಮಾನ್ ಹತ್ಯೆಗೈದ ಆರೋಪಿಗಳು.
ಕಬ್ಬು ಕಡಿಯುವ ಕೆಲಸಕ್ಕೆಂದು ಮೃತ ಬಸೀರ್ ಸಾಬ್ ಹಾಗೂ ಈತನ ಅಣ್ಣ ಜಾಕೀರ್ ಸಾಬ್ ಅವರು ಹೊಸಪೇಟೆ ತಾಲೂಕು ಕೂಡ್ಲಗಿಯ ಬಿ.ಪಿ.ತಾಂಡಾದಿಂದ ಬಿ.ಹೊಸೂರು ಗ್ರಾಮಕ್ಕೆ ಬಂದಿದ್ದರು. ಗಂಟಗೌಡನಹಳ್ಳಿಯ ಸ್ವಾಮಿ ಎಂಬುವರ ಆಲೆಮನೆ ಬಳಿ ಶೆಡ್ಡು ಹಾಕಿಕೊಂಡು ವಾಸಿಸುತ್ತಿದ್ದರು. ಈಗ್ಗೆ ಎರಡು ತಿಂಗಳ ಹಿಂದೆ ಸಣ್ಣ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಜಗಳವಾಗಿ ಬಸೀರ್ ಸಾಬ್ ಜಾಕೀರ್‌ನ ಮೇಲೆ ಹಲ್ಲೆ ನಡೆಸಿದ್ದನು ಎನ್ನಲಾಗಿದೆ. ನಂತರ ಗಂಟಗೌಡನಹಳ್ಳಿಯಿಂದ ಬಿ.ಹೊಸೂರಿನ ಚಂದ್ರಣ್ಣ ಎಂಬವರ ಆಲೆಮನೆಗೆ ಬಂದು ಕೆಲಸಕ್ಕೆ ಸೇರಿಕೊಂಡು ಅಲ್ಲೇ ವಾಸವಾಗಿದ್ದರು.ಜಾಕೀರ್ ಸಾಬ್‌ಗೆ ಬಸೀರ್‌ಸಾಬ್ ಹಲ್ಲೆ ನಡೆಸಿದ್ದರಿಂದ ಜಾಕೀರ್ ಸಾಬ್‌ನ ಮಕ್ಕಳಾದ ಅಲ್ಲಾ ಭಕ್ಷಾ, ಅಮಾನ್ ಅವರು ದ್ವೇಷ ಸಾಧಿಸುತ್ತಿದ್ದರು. ಕಳೆದ ಸೆ.೩೦ರಂದು ಮಧ್ಯಾಹ್ನ ಬಸೀರ್‌ಸಾಬ್ ಬಿಳಿದೇಗಲು ಗ್ರಾಮದಲ್ಲಿ ಮದ್ಯಪಾನ ಮಾಡಲು ಹೋಗಿದ್ದಾಗ ಜಗಳ ಮಾಡಿದ್ದಾರೆ. ದ್ವೇಷ ಸಾಧಿಸಿಕೊಂಡು ಅದೇ ದಿನ ರಾತ್ರಿ ೧೧ರ ಸಮಯದಲ್ಲಿ ಬಿ.ಹೊಸೂರು ಗ್ರಾಮದಲ್ಲಿದ್ದ ಶೆಡ್‌ಗೆ ಬಂದು ಮಲಗಿದ್ದ ಬಸೀರ್ ಸಾಬ್‌ನನ್ನು ಎಬ್ಬಿಸಿ ಕಬ್ಬು ಕಡಿಯುವ ದರಾಂತಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಇದನ್ನು ನೋಡಿದ ಬಸೀರ್‌ಸಾಬ್‌ನ ಪತ್ನಿ ರೇಷ್ಮಾ ಕೂಗಿಕೊಳ್ಳಲಾಗಿ ಪಕ್ಕದ ಮನೆಯ ಜಗಣ್ಣ ಹಾಗೂ ನೆರೆಹೊರೆಯವರು ಬರುತ್ತಿದ್ದಂತೆ ಆರೋಪಿಗಳಾದ ಅಲ್ಲಾ ಭಕ್ಷಾ ಹಾಗೂ ಅಮಾನ್ ಅವರು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಬಸೀರ್‌ಸಾಬ್‌ನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಮೃತ ಬಸೀರ್ ಸಾಬ್‌ನ ಪತ್ನಿ ರೇಷ್ಮಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಕೆರಗೋಡು ಪೊಲೀಸರು, ಆರೋಪಿಗಳಾದ ಅಲ್ಲಾ ಭಕ್ಷಾ ಹಾಗೂ ಅಮಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ವಿದ್ಯುಟ್ ಶಾರ್ಟ್ ಸರ್ಕ್ಯೂಟ್: ಮನೆಯ ವಸ್ತುಗಳು ಭಸ್ಮಪಾಂಡವಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಮಂಗಳೂರು ಹೆಂಚಿನ ಮನೆಯಲ್ಲಿ ಅಪಾರ ನಷ್ಟ ಉಂಟಾಗಿರುವ ಘಟನೆ ತಾಲೂಕಿನ ಹೊಸಹಳ್ಳಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ರೈತ ಸಂಘದ ಮುಖಂಡ ಜಯರಾಂ ಅವರಿಗೆ ಸೇರಿದ ಮನೆಗೆ ರಾತ್ರಿ 11ರ ಸುಮಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಮನೆಯಲ್ಲಿದ್ದವರೆಲ್ಲರೂ ಹೊರಗಡೆ ಬಂದಿದ್ದಾರೆ. ಈ ವೇಳೆ ರೈತ ಮುಖಂಡ ಜಯರಾಂಗೆ ಮಾತ್ರ ಸಣ್ಣ ಪುಟ್ಟ ಗಾಯಗಳಾಗಿದ್ದು, ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬೆಂಕಿಯಿಂದಾಗಿ ಮನೆಯಲ್ಲಿದ್ದ ಧವಸ-ಧಾನ್ಯಗಳು, ಪಾತ್ರೆ-ಪಗಡಗಳು ಸೇರಿದಂತೆ ಇತರೆ ಪದಾರ್ಥಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರು ನಷ್ಟ ಸಂಭವಿಸಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ ಸಾಂತ್ವನ ಹೇಳಿದರು.