ಸಾರಾಂಶ
ವಿಧವೆ ವಾಸವಾಗಿದ್ದ ಒಂಟಿ ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪು ಆಕೆಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ, ಹಲ್ಲೆನಡೆಸಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ಪದಾರ್ಥಗಳನ್ನು ದರೋಡೆ ಮಾಡಿರುವ ಘಟನೆ ಮದ್ದೂರು ಪಟ್ಟಣದ ವಿನಾಯಕ ಬಡಾವಣೆಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ವಿಧವೆ ವಾಸವಾಗಿದ್ದ ಒಂಟಿ ಮನೆಗೆ ನುಗ್ಗಿದ ಮುಸುಕುದಾರಿ ದುಷ್ಕರ್ಮಿಗಳ ಗುಂಪು ಆಕೆಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ, ಹಲ್ಲೆನಡೆಸಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ಪದಾರ್ಥಗಳನ್ನು ದರೋಡೆ ಮಾಡಿರುವ ಘಟನೆ ಪಟ್ಟಣದ ಶಿವಪುರ ಸಮೀಪದ ವಿನಾಯಕ ಬಡಾವಣೆಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಬಡಾವಣೆಯ ಲೇ.ಶ್ರೀಕಂಠಯ್ಯ ಪತ್ನಿ ಸಿ.ಸವಿತಾ ದುಷ್ಕರ್ಮಿಗಳು ನಡೆಸಿದ ಹಲ್ಲೆಯಿಂದ ಸಣ್ಣಪುಟ್ಟ ರಕ್ತಸಿಕ್ತ ಗಾಯವಾಗಿದೆ.
ಮಧ್ಯರಾತ್ರಿ 1.30 ಸುಮಾರಿಗೆ ಸವಿತಾ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಮನೆ ಮುಂಭಾಗದ ಬಾಗಿಲನ್ನು ಬಲವಾದ ಆಯುಧದಿಂದ ಮೀಟಿ ಹಾನಿಗೊಳಿಸಿ ಒಳ ನುಗ್ಗಿರುವ ಐವರು ದುಷ್ಕರ್ಮಿಗಳ ಪೈಕಿ ಇಬ್ಬರು ಸವಿತಾ ಅವರಿಗೆ ಲಾಂಗು ಮತ್ತು ರಾಡು ತೋರಿಸಿ ಬೆದರಿಕೆ ಹಾಕಿದ್ದಾರೆ.
ಇದಕ್ಕೆ ಪ್ರತಿರೋಧ ತೋರಿಸಿದ ಆಕೆ ಮೇಲೆ ಹಲ್ಲೆ ನಡೆಸಿ ಕೈಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿದ ನಂತರ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ಕಿವಿಯೋಲೆ ಕಸಿದುಕೊಂಡಿದ್ದಾರೆ.
ಬಳಿಕ ದುಷ್ಕರ್ಮಿಗಳು ಮನೆ ಬೀರುವಿನಲ್ಲಿದ್ದ ಚಿನ್ನದ ಚೈನು, ಎರಡು ಜೊತೆ ಬಳೆ, ಉಂಗುರಗಳುಸ ಮುತ್ತಿನ ಸರ ಸೇರಿದಂತೆ ಸುಮಾರು 6 ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಸವಿತಾರ ಪತಿ ಶ್ರೀಕಂಠಯ್ಯ ಶಿವಪುರದಲ್ಲಿ ಡಾಬಾ ನಡೆಸುತ್ತಿದ್ದು, ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ನಂತರ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎವೆರಡಿ ಕಂಪನಿಯಲ್ಲಿ ಸವಿತಾ ಉದ್ಯೋಗ ಮಾಡುತ್ತಿದ್ದರು.
ಮದ್ದೂರಿನ ಕೊಪ್ಪ ಹೊಸ ಸರ್ಕಲ್‌ನ ವಿನಾಯಕ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಂಡು ಒಂಟಿಯಾಗಿ ವಾಸ ಮಾಡುತ್ತಿದ್ದರು. ಬೇಸಿಗೆಯಿಂದ ಸೆಕೆ ಹೆಚ್ಚಾದ ಕಾರಣ ಜೋರಾಗಿ ಫ್ಯಾನ್ ಹಾಕಿಕೊಂಡು ನಿದ್ರೆಗೆ ಜಾರಿದ್ದರು. ಈ ವೇಳೆ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಮನೆಯೊಳಗೆ ಪ್ರವೇಶ ಮಾಡಿ ಕೊಠಡಿ ಬಾಗಿಲು ಬಡಿದಾಗ ಎಚ್ಚರಗೊಂಡ ಸವಿತಾ ರಕ್ಷಣೆಗಾಗಿ ಕೂಗಿಕೊಂಡರಾದರೂ ಅಕ್ಕ ಪಕ್ಕದ ಮನೆಯ ನಿವಾಸಿಗಳು ಆಕೆಯ ರಕ್ಷಣೆಗೆ ಧಾವಿಸಲಿಲ್ಲ.
ನಂತರ ಆಕೆ ಮೊಬೈಲ್ ಕಸಿದುಕೊಂಡ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿ ಕೃತ್ಯ ನಡೆಸಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಮದ್ದೂರು ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕಾರ್ಯ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಇ.ಗಂಗಾಧರ ಸ್ವಾಮಿ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ, ಮೈಸೂರು ಬೆರಳಚ್ಚು ತಜ್ಞರ ವಿಭಾಗದ ಡಿವೈಎಸ್ಪಿ ರವೀಂದ್ರ ಹೊಸಮನಿ, ಮದ್ದೂರು ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಕೆ. ಆರ್. ಪ್ರಸಾದ್, ಶ್ವಾನದಳ ಮತ್ತು ಮೈಸೂರು ಹಾಗೂ ಮಂಡ್ಯ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.