ಸಾರಾಂಶ
ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆಗೆ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶಿಸಿರುವ ಹೈಕೋರ್ಟ್, ಘಟನೆ ಕುರಿತು ಡಿ.14ರ ಒಳಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆಗೆ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶಿಸಿರುವ ಹೈಕೋರ್ಟ್, ಘಟನೆ ಕುರಿತು ಡಿ.14ರ ಒಳಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.ಮಂಗಳವಾರ ಕಲಾಪದ ವೇಳೆ ಘಟನೆ ಕುರಿತು ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.ಅಲ್ಲದೆ, ಘಟನೆಯ ಕುರಿತಂತೆ ಕೆಲ ಮಾಧ್ಯಮಗಳು ಪ್ರಸಾರ ಮಾಡಿದ ವರದಿಯಲ್ಲಿ ಆಕ್ಷೇಪಾರ್ಹವಾಗಿ ಸಂತ್ರಸ್ತೆಯ ಚಿತ್ರ, ಸುದ್ದಿಯ ತಲೆಬರಹ ಮತ್ತು ಅಡಿಬರಹ ಪ್ರಕಟಿಸಿರುವುದಕ್ಕೆ ಹೈಕೋರ್ಟ್ ಇದೇ ವೇಳೆ ಕಿಡಿಕಾರಿದೆ.ಘಟನಾ ಸ್ಥಳಕ್ಕೆ ತೆರಳಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂತ್ರಸ್ತ ಮಹಿಳೆಗೆ ಸಮಾಧಾನ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮಗಳು ಚಿತ್ರ ಪ್ರಕಟಿಸುವಾಗ ಕನಿಷ್ಠ ಪಕ್ಷ ಸಂತ್ರಸ್ತೆಯ ಚಿತ್ರವನ್ನು ಬ್ಲರ್ ಮಾಡುವ ಮೂಲಕ ಸೂಕ್ಷ್ಮತೆ ಪ್ರದರ್ಶಿಸಿವೆ. ಆದರೆ, ವಿದ್ಯುನ್ಮಾನ ಮಾಧ್ಯಮ ಅಥವಾ ಅವುಗಳ ಪ್ರತಿನಿಧಿಗಳು ಸಂತ್ರಸ್ತೆ ಮಹಿಳೆ ಘಟನೆ ವಿವರಿಸುವುದು, ಆಕೆಯ ಪ್ರತಿಕ್ರಿಯೆಯನ್ನು ವಿಡಿಯೋ ಮಾಡಿದ್ದಾರೆ. ಇದು ಬೇಜವಾಬ್ದಾರಿ ಮತ್ತು ಅಸೂಕ್ಷ್ಮತೆಯಿಂದ ಪ್ರದರ್ಶನವಾಗಿದೆ ಎಂದು ಕಟುವಾಗಿ ನುಡಿದಿದೆ.
ಹಾಗೆಯೇ, ಯಾವುದೇ ಮಾಧ್ಯಮ ಅಥವಾ ಅವರ ಪ್ರತಿನಿಧಿಯು ಸಚಿವರು ಭೇಟಿ ನೀಡಿದ್ದಾಗ ಸಂತ್ರಸ್ತೆಯ ಸಂದರ್ಶನ ಮಾಡಿಕೊಂಡಿದ್ದರೆ ಅಥವಾ ಪ್ರತಿಕ್ರಿಯೆ ಪಡೆದಿರುವುದನ್ನು ರೆಕಾರ್ಡ್ ಮಾಡಿಕೊಂಡಿದ್ದರೆ, ಅದನ್ನು ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಸುದ್ದಿ ವಾಹಿನಿಗಳು ಪ್ರಸಾರ ಮಾಡಬಾರದು. ಈಗಾಗಲೇ ಆ ಸಂದರ್ಶನ/ಪ್ರತಿಕ್ರಿಯೆ ಪ್ರಸಾರ ಮಾಡಿದ್ದರೆ ಅದನ್ನು ಮರುಪ್ರಸಾರ ಮಾಡಬಾರದು ಎಂದು ನ್ಯಾಯಪೀಠ ತಾಕೀತು ಮಾಡಿದೆ.ಕೇವಲ ಸಂತ್ರಸ್ತೆಯ ಘನತೆ ಕಾಪಾಡಲು, ಆಕೆಯ ಗುರುತು ಬಹಿರಂಗವಾಗುವುದನ್ನು ತಪ್ಪಿಸುವ ಏಕೈಕ ಉದ್ದೇಶದಿಂದ ಈ ಮಧ್ಯಂತರ ಆದೇಶ ಮಾಡಲಾಗಿದೆ ಆದರೆ, ಮಾಧ್ಯಮಗಳನ್ನು ಸುದ್ದಿ ಪ್ರಸಾರ ಮಾಡುವುದಕ್ಕೆ ನಿಷೇಧ ಹೇರುತ್ತಿಲ್ಲ ಹಾಗೂ ಮಾಧ್ಯಮ ಸ್ವಾತಂತ್ರ್ಯವನ್ನು ನ್ಯಾಯಾಲಯ ಒಪ್ಪುತ್ತದೆ ಎಂದು ಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.ವಿಚಾರಣೆಗೆ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಘಟನೆಗೆ ಅನಗತ್ಯ ಪ್ರಚಾರ ನೀಡದಿರುವುದಕ್ಕೆ ಸಂಬಂಧಿಸಿದಂತೆ ತಕ್ಷಣ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.ಪ್ರಕರಣವೇನು?ಬೆಳಗಾವಿ ತಾಲೂಕಿನ ವಂಟಮುರಿ ಗ್ರಾಮದ 24 ವರ್ಷದ ಯುವಕ ಮತ್ತು 18 ವರ್ಷದ ಯುವತಿ ಪ್ರೀತಿಸುತ್ತಿದ್ದರು. ಯುವತಿಗೆ ಆಕೆಯ ಕುಟುಂಬದವರು ಬೇರೊಬ್ಬ ಯುವಕನೊಂದಿಗೆ ಮದುವೆ ನಿಗದಿಪಡಿಸಿ ನಿಶ್ಚಿತಾರ್ಥ ಇಟ್ಟುಕೊಂಡಿದ್ದರು. ನಿಶ್ಚಿತಾರ್ಥದ ಹಿಂದಿನ ದಿನ ಮಧ್ಯರಾತ್ರಿ ಪ್ರೇಮಿಗಳಿಬ್ಬರು ಮನೆಬಿಟ್ಟು ಪರಾರಿಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಯುವತಿಯ ಕುಟುಂಬದವರು, ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ್ದರು. ಈ ಘಟನೆಯನ್ನು ಮಾಧ್ಯಮಗಳ ವರದಿ ಮಾಡಿದ್ದವು.ಅಮೃತ ಕಾಲದಲ್ಲಿನ ಘಟನೆ ಬೇಸರ ತರಿಸಿದೆ: ಪೀಠಒಂದು ಕಡೆ ಈ ದೇಶದಲ್ಲಿ 76ನೇ ವರ್ಷದ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ನಡೆಸಲಾಗುತ್ತಿದೆ. ಮತ್ತೊಂದೆಡೆ ಮೈಸೂರು ರಾಜ್ಯದ ಕಾಲದಿಂದಲೂ ಕರ್ನಾಟಕ ಪ್ರಗತಿಪರ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸಿರುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ ಎಂಬುದಾಗಿ ಗುರುತಿಸಿಕೊಂಡಿದೆ. ಇಂತಹ ರಾಜ್ಯದಲ್ಲಿ ಈ ಘಟನೆ ನಡೆದಿದೆ ಬೇಸರ ತರಿಸಿದೆ ಎಂದು ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿದೆ.