ಸಾರಾಂಶ
ಬೆಂಗಳೂರು : ದುಷ್ಕರ್ಮಿಗಳು ಬಿಳಿ ಹಾಳೆಗಳ ಕಟ್ಟುಗಳ ಮೇಲೆ ₹500 ಮುಖಬೆಲೆಯ ಅಸಲಿ ನೋಟು ಇರಿಸಿ ಗುಜರಿ ವ್ಯಾಪಾರಿಗೆ ವಂಚಿಸಲು ಯತ್ನಿಸಿದ ಆರೋಪದಡಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಟನ್‌ಪೇಟೆ ನಿವಾಸಿ ಕಾರ್ತಿಕ್ ಎಂಬುವವರು ನೀಡಿದ ದೂರಿನ ಮೇರೆಗೆ ಭರತ್, ರಾಮಾಕಾಂತ್ ಹಾಗೂ ಇತರರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಮೋಸ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ಗುಜರಿ ವ್ಯಾಪಾರಿ ಕಾರ್ತಿಕ್ ಕಾಟನ್‌ಪೇಟೆಯ ಜಾಲಿ ಮೊಹಲ್ಲಾದಲ್ಲಿ ಕೆಲ ವರ್ಷಗಳಿಂದ ಗುಜರಿ ವ್ಯಾಪಾರ ಮಾಡಿಕೊಂಡಿದ್ದಾರೆ. ಹಳೇಯ ವಸ್ತುಗಳನ್ನು ದೆಹಲಿ ವ್ಯಾಪಾರಿಗಳಿಗೆ ಕಳುಹಿಸಿ ಬಳಿಕ ದೆಹಲಿಗೆ ತೆರಳಿ ಹಣ ಸಂಗ್ರಹಿಸುತ್ತಿದ್ದರು. ಜು.24ರಂದು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕಾರ್ತಿಕ್ ಮೊಬೈಲ್‌ಗೆ ವಾಟ್ಸಾಪ್ ಕರೆ ಮಾಡಿದ ವ್ಯಕ್ತಿ ವ್ಯಕ್ತಿ ತನ್ನನ್ನು ಭರತ್ ಎಂದು ಪರಿಚಯಿಸಿಕೊಂಡು, ತಾನು ಹಣಕಾಸು ವ್ಯವಹಾರ ಮಾಡುತ್ತಿರುವುದಾಗಿ ಹೇಳಿದ್ದಾನೆ.
₹20 ಲಕ್ಷ ಕೊಡಲು ಒಪ್ಪಿಗೆ:
ದೆಹಲಿಯಲ್ಲಿ ನನಗೆ ತುರ್ತಾಗಿ ₹20 ಲಕ್ಷ ಅವಶ್ಯಕತೆ ಇದೆ. ದೆಹಲಿಯಲ್ಲಿ ನೀವು ಹಣ ಕೊಡಿಸಿದರೆ, ಬೆಂಗಳೂರಿನಲ್ಲಿ ನಾನು ನಿಮಗೆ ₹20 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದಾನೆ. ಬೆಂಗಳೂರಿನಲ್ಲಿ ನನ್ನ ಕಡೆಯ ವ್ಯಕ್ತಿಯಿಂದ ನೀವು ₹20 ಲಕ್ಷ ಪಡೆದುಕೊಂಡ ಬಳಿಕವೇ ದೆಹಲಿಯಲ್ಲಿ ನಿಮ್ಮ ಕಡೆಯ ವ್ಯಕ್ತಿಯಿಂದ ನನ್ನ ಕಡೆಯ ವ್ಯಕ್ತಿಗೆ ಹಣ ಕೊಟ್ಟರೆ ಸಾಕು ಎಂದಿದ್ದಾನೆ. ಈತನ ಮಾತು ನಂಬಿದ ಕಾರ್ತಿಕ್, ಬೆಂಗಳೂರಿನಲ್ಲಿ ಹಣ ಪಡೆದು ಬಳಿಕ ದೆಹಲಿಯಲ್ಲಿ ಹಣ ಕೊಡಿಸಲು ಒಪ್ಪಿಕೊಂಡಿದ್ದಾರೆ.
ಬಿಳಿ ಹಾಳೆಗಳ ಕಟ್ಟು ನೀಡಿ ವಂಚನೆಗೆ ಯತ್ನ:
ಬಳಿಕ ಆರೋಪಿ ಭರತ್, ಬೆಂಗಳೂರಿನಲ್ಲಿ ರಮಾಕಾಂತ್ ನಿಮಗೆ ₹20 ಲಕ್ಷ ಕೊಡುತ್ತಾರೆ ಎಂದು ಮೊಬೈಲ್ ಸಂಖ್ಯೆ ನೀಡಿದ್ದಾನೆ. ಆ.26ರಂದು ಕಾರ್ತಿಕ್‌ಗೆ ಕರೆ ಮಾಡಿರುವ ರಮಾಕಾಂತ್ ಚಿಕ್ಕಪೇಟೆಯ ಮೆಟ್ರೋ ನಿಲ್ದಾಣದ ಬಳಿ ಬಂದು ಹಣ ತೆಗೆದುಕೊಂಡು ಹೋಗುವಂತೆ ಕರೆದಿದ್ದಾನೆ. ಅದರಂತೆ ಕಾರ್ತಿಕ್ ಮೆಟ್ರೋ ನಿಲ್ದಾಣದ ಬಳಿ ತೆರಳಿದಾಗ, ಇಬ್ಬರು ಅಪರಿಚಿತ ವ್ಯಕ್ತಿಗಳು ಕಾರ್ತಿಕ್ ಬಳಿ ಬಂದಿದ್ದಾರೆ. ಈ ಪೈಕಿ ಒಬ್ಬಾತ ನಾನು ರಮಾಕಾಂತ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಅಲ್ಲೇ ಇದ್ದ ಆಟೋರಿಕ್ಷಾವೊಂದರ ಬಳಿ ಕಾರ್ತಿಕ್‌ನನ್ನು ಕರೆದೊಯ್ದು ₹500 ಮುಖಬೆಲೆಯ 10 ಬಂಡಲ್‌ಗಳನ್ನು ನೀಡಿದ್ದಾರೆ.
ಕಟ್ಟಿನ ಪ್ಲಾಸ್ಟರ್ ಬಿಚ್ಚುವಾಗ ಪರಾರಿ
ಪ್ರತಿ ಕಟ್ಟಿಗೆ ಪ್ಲಾಸ್ಟಿಕ್ ಕವರ್ ಸುತ್ತಿರುವುದು ಕಂಡು ಬಂದಿದೆ. ಕೂಡಲೇ ದೆಹಲಿಗೆ ನಿಮ್ಮ ಕಡೆಯ ವ್ಯಕ್ತಿಗೆ ಕರೆ ಮಾಡಿ ನಮ್ಮ ಕಡೆಯ ವ್ಯಕ್ತಿಗೆ ಹಣ ನೀಡುವಂತೆ ಹೇಳಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಕಾರ್ತಿಕ್, ಒಂದು ಹಣದ ಕಟ್ಟನ್ನು ತೆಗೆದು ಅದಕ್ಕೆ ಸುತ್ತಲಾಗಿದ್ದ ಪ್ಲಾಸ್ಟರ್ ಬಿಚ್ಚಲು ಪ್ರಾರಂಭಿಸಿದ್ದಾರೆ. ಈ ನಡುವೆ ಆ ಅಪರಿಚಿತರು ಕೂಡಲೇ ದೆಹಲಿಗೆ ಕರೆ ಮಾಡಿ ಹಣ ನೀಡುವಂತೆ ಹೇಳಲು ಒತ್ತಾಯಿಸಿದ್ದಾರೆ. ಆದರೂ ಕಾರ್ತಿಕ್ ಕಟ್ಟಿನ ಪ್ಲಾಸ್ಟರ್ ಬಿಚ್ಚುವನ್ನು ಮುಂದುವರೆಸಿದ್ದಾರೆ. ಈ ವೇಳೆ ವಿಚಲಿತರಾದ ಪರಿಚಿತರು ಇಲ್ಲೇ ಬರುವುದಾಗಿ ಹೇಳಿ ಕಾಟನ್ ಪೇಟೆಯ ಮುಖ್ಯರಸ್ತೆಯ ಕಡೆಗೆ ಓಡಿ ಹೋಗಿದ್ದಾರೆ.
ಮೊಬೈಲ್ ಸ್ವಿಚ್ಡ್ ಆಫ್
ಬಳಿಕ ಕಾರ್ತಿಕ್ ಅಲ್ಲೇ ಕುಳಿತು ಕಟ್ಟುಗಳ ಪ್ಲಾಸ್ಟರ್ ಬಿಚ್ಚಿ ನೋಡಿದಾಗ, ದುಷ್ಕರ್ಮಿಗಳು ಬಿಳಿ ಹಾಳೇಗಳ ಕಟ್ಟುಗಳ ಮೇಲೆ ಮತ್ತು ಕೆಳಗೆ ₹500 ಮುಖ ಬೆಲೆಯ ಅಸಲಿ ನೋಟು ಇರಿಸಿರುವುದು ಕಂಡು ಬಂದಿದೆ. ಕೂಡಲೇ ಕಾರ್ತಿಕ್, ಭರತ್ ಮತ್ತು ರಮಾಕಾಂತ್‌ಗೆ ಕರೆ ಮಾಡಿದಾಗ ಇಬ್ಬರ ಮೊಬೈಲ್‌ಗಳು ಸ್ವಿಚ್ಡ್ ಆಫ್ ಬಂದಿವೆ. ಕಾರ್ತಿಕ್ ಈ ಸಂಬಂಧ ಸಿಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.