ಸಾರಾಂಶ
ಮನೆ ಗಾರೆ ಕೆಲಸಕ್ಕೆ ಬಂದಿದ್ದ ಇಬ್ಬರು ಮಾಲೀಕನ ಮನೆಯಲ್ಲಿಯೇ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದಿದ್ದು, ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಪಟ್ಟಣದಲ್ಲಿ ಜರುಗಿದೆ.
ಮದ್ದೂರು : ಮನೆ ಗಾರೆ ಕೆಲಸಕ್ಕೆ ಬಂದಿದ್ದ ಇಬ್ಬರು ಮಾಲೀಕನ ಮನೆಯಲ್ಲಿಯೇ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದಿದ್ದು, ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಪಟ್ಟಣದಲ್ಲಿ ಜರುಗಿದೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಚಿಕ್ಕೋಡಿ ಗ್ರಾಮದ ರಂಗಪ್ಪ ಅಲಿಯಾಸ್ ರಘು (26) ಹಾಗೂ ಮದ್ದೂರು ವಿ.ವಿ.ನಗರ ಬಡಾವಣೆಯ 7ನೇ ಕ್ರಾಸ್ ನಿವಾಸಿ ಪುಟ್ಟರಾಜು ಅಲಿಯಾಸ್ ರಾಜು (32) ಬಂಧಿತ ಆರೋಪಿಗಳು.
ಈ ಪೈಕಿ ಪುಟ್ಟರಾಜು ಅಲಿಯಾಸ್ ರಾಜುಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಇದರಿಂದ ಅಸ್ವಸ್ಥಗೊಂಡ ಪುಟ್ಟರಾಜನಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ನೀಡಲಾಗಿದೆ.
ಪಟ್ಟಣದ ಹಳೆ ಎಂಸಿ ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜ್ ಬಳಿ ಇರುವ ಶ್ರೀನಂದಿ ಮೆಡಿಕಲ್ ಸ್ಟೋರ್‌ನ ಮಾಲೀಕ ಕೆ.ಎಂ.ಬಸವ ರಾಜೇಂದ್ರ ಪ್ರಸಾದ್ ಅವರ ಮನೆಗೆ ರಂಗಪ್ಪ ಹಾಗೂ ಪುಟ್ಟರಾಜು ಗಾರೆ ಕೆಲಸಕ್ಕಾಗಿ ಬಂದಿದ್ದರು.
ಪ್ರಸಾದ್ ಅವರು ತಮ್ಮ ಮಗಳನ್ನು ನೋಡಲು ಮಣಿಪಾಲ್‌ಗೆ ಹೋಗಿದ್ದನ್ನು ದುರುಪಯೋಗ ಪಡಿಸಿಕೊಂಡ ರಂಗಪ್ಪ ಹಾಗೂ ಪುಟ್ಟರಾಜು ಪ್ರಸಾದ್ ಅವರ ಮನೆ ಬಾಗಿಲನ್ನು ಬಲವಾದ ಆಯುಧದಿಂದ ಮೀಟಿ ಮನೆಯೊಳಗೆ ನುಗ್ಗಿ ಕಳುವು ಮಾಡಲು ಯತ್ನಿಸಿದ್ದಾರೆ. ಈ ವೇಳೆ ಮನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಹೋದರ ಕೆ.ಎಂ.ನಂಜುಂಡಸ್ವಾಮಿ ಅವರಿಗೆ ಮನೆಯೊಳಗೆ ಕಳ್ಳರು ನುಗ್ಗಿರೋ ಬಗ್ಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ನಂಜುಂಡಸ್ವಾಮಿ ಸಾರ್ವಜನಿಕರ ನೆರವಿನಿಂದ ಕಳ್ಳರ ಪೈಕಿ ಪುಟ್ಟರಾಜನನ್ನು ಹಿಡಿದುಕೊಂಡು ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ನಂತರ ಸ್ಥಳದಲ್ಲಿದ್ದ ರಂಗಪ್ಪ ಪರಾರಿಯಾಗಿದ್ದನು. ಬಳಿಕ ಪೊಲೀಸರು ಆತನನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಜಮೀರ್ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೈಕ್ ಗಳ ಕಳ್ಳತನ ಪ್ರಕರಣ ಹೆಚ್ಚಳ ಆತಂಕದಲ್ಲಿ ಜನರು
ಪಾಂಡವಪುರ:ತಾಲೂಕಿನಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರಲ್ಲಿ ಆತಂಕ ಎದುರಾಗಿದೆ.
ತಾಲೂಕಿನ ಚಿನಕುರಳಿ ಗ್ರಾಮ ಒಂದರಲ್ಲೇ ತಿಂಗಳಿಂದೀಚೆಗೆ ನಾಲ್ಕು ಬೈಕ್‌ಗಳು ಕಳ್ಳತನವಾಗಿವೆ. ಗ್ರಾಮೀಣ ಪ್ರದೇಶದ ಭಾಗದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವುದು ಸಾರ್ವಜನಿಕರದಲ್ಲಿ ಆತಂಕ ಹೆಚ್ಚಾಗಿದೆ.ಚಿನಕುರಳಿ ಗ್ರಾಮದಲ್ಲಿ ಮನೆಗಳು, ಅಂಗಡಿ-ಮುಂಗಟ್ಟುಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಕಳ್ಳರು ಕದ್ದು ಪರಾರಿಯಾಗುತ್ತಿರುವ ದೃಶ್ಯಾವಳಿ ಅಲ್ಲಿನ ಹಲವು ಸಿಸಿ ಟಿವಿಗಳಲ್ಲಿ ಸೆರೆಯಾಗಿವೆ.
ಸಾರ್ವಜನಿಕರು ಮನೆಗಳ ಮುಂದೆ ಬೈಕ್ ನಿಲ್ಲಿಸುವುದಕ್ಕೆ ಆತಂಕ ಪಡುವ ಸ್ಥಿತಿ ಎದುರಾಗಿದೆ.ಕಳೆದ ತಿಂಗಳಿಂದೀಚೆಗೆ ಮೂರ್‍ನಾಲ್ಕು ಬೈಕ್‌ಗಳು ಕಳ್ಳತನವಾಗಿರುವುದರಿಂದ ಬೈಕ್‌ಗಳಿಗೆ ಇನ್ಸೂರೆನ್ಸ್ ಇರುವ ಮಾಲೀಕರು ಮಾತ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ಸೂರೆನ್ಸ್ ಇಲ್ಲದ ಬೈಕ್ ಮಾಲೀಕರು ಸುಮ್ಮನಾಗಿದ್ದಾರೆ.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೈಕ್ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದರೆ, ಬೈಕ್ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.ಚಿನಕುರಳಿ ಸೇರಿದಂತೆ ತಾಲೂಕಿನ ವಿವಿಧಡೆ ನಡೆಯುತ್ತಿರುವ ಬೈಕ್‌ಕಳ್ಳರನ್ನು ಪೊಲೀಸರು ಸೆರೆಹಿಡಿಯುವ ಮೂಲಕ ಬೈಕ್ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಬೇಕೆನ್ನುವುದು ಚಿನಕುರಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.