ಕೆ.ಸಿ.ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಗು ಸಾವು: ಧರಣಿ

| Published : Dec 19 2023, 01:45 AM IST

ಕೆ.ಸಿ.ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಗು ಸಾವು: ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮಗು ಸಾವು: ಪೋಷಕರ ಆಕ್ರೋಶ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಮಲ್ಲೇಶ್ವರದಲ್ಲಿರುವ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಹೆರಿಗೆ ಮಾಡಲು ವೈದ್ಯರು ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಮಗು ಹೆರಿಗೆ ಮಾಡುವಾಗಲೇ ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ.

ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರನ್ನು ಒಪ್ಪಿಸುವಂತೆ ಸೋಮವಾರ ಆಸ್ಪತ್ರೆ ಎದುರು ಗಲಾಟೆ ಮಾಡಿದ್ದಾರೆ.

ಚೊಕ್ಕಸಂದ್ರದ ದೇವಿಕಾ ಎಂಬುವವರು ಗರ್ಭ ಧರಿಸಿ 9 ತಿಂಗಳು ತುಂಬಿ 12 ದಿನಗಳಾಗಿತ್ತು. ಆಸ್ಪತ್ರೆ ವೈದ್ಯರು 9 ತಿಂಗಳು ತುಂಬಿದ್ದರೂ ಹೆರಿಗೆ ಮಾಡಿರಲಿಲ್ಲ. ಹೀಗಾಗಿ ನಿಗದಿತ ದಿನಾಂಕ ಮೀರಿದೆ. ಗರ್ಭಿಣಿ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ. ಹೀಗಾಗಿ ಸಿಸೇರಿಯನ್‌ ಮಾಡಿ ಡೆಲಿವರಿ ಮಾಡಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದರು.

ಆದರೆ ವೈದ್ಯರು ಸಿಸೇರಿಯನ್​ಗೆ ಒಪ್ಪದೇ ಸಹಜ ಹೆರಿಗೆಗೆ ಮುಂದಾಗಿದ್ದರು. ಸಹಜ ಹೆರಿಗೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿ ಕೊನೆಗೆ ನಾರ್ಮಲ್ ಆಗಲ್ಲ, ಸಿಸೇರಿಯನ್ ಮಾಡಬೇಕು ಎಂದರು. ಬಳಿಕ ಮಗು ನೀರು ಕುಡಿದು ಸತ್ತು ಹೋಗಿದೆ ಎಂದರು. ಇದೆಲ್ಲವೂ ವೈದ್ಯರ ನಿರ್ಲಕ್ಷ್ಯದಿಂದಲೇ ಆಗಿದೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಂಬಂಧಿಕರು, ‘ಲಂಚ ಲಂಚ ಅಂತಾ ಸಾಯ್ತಾ ಇದ್ದಾರೆ. ಆ ಲಂಚದ ಹಣದಿಂದ ಈಗ ಮಗು ಪ್ರಾಣ ಬರುತ್ತಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಿರ್ಲಕ್ಷ್ಯ ಕಂಡುಬಂದರೆ

ಕ್ರಮ: ಡಾ। ಮೋಹನ್‌

ಘಟನೆ ಬಗ್ಗೆ ಹೇಳಿಕೆ ನೀಡಿರುವ ಕೆ.ಸಿ.ಜನರಲ್‌ ಆಸ್ಪತ್ರೆ ವೈದ್ಯಕೀಯ ಅಧಿಕಾರಿ ಡಾ। ಮೋಹನ್‌, ‘ಡಾ। ವಿಜಯಲಕ್ಷ್ಮಿ ಎಂಬುವವರು ಈ ಹೆರಿಗೆ ದಾಖಲಾತಿಯನ್ನು ನೋಡುತ್ತಿದ್ದರು. ಡಿಸೆಂಬರ್ 10ಕ್ಕೆ ಡೆಲಿವರಿ ಡೇಟ್ ಇತ್ತು. ಆದರೆ ಆಗ ಸಿಸೇರಿಯನ್ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಸಹಜ ಹೆರಿಗೆ ಆಗದಿರುವುದರಿಂದ ಸಿಸೇರಿಯನ್‌ ಮಾಡಿದ್ದಾರೆ. ಈ ವೇಳೆ ‘ಮಗುವಿನ ಹೃದಯಬಡಿತ ಕಡಿಮೆ ಇತ್ತು. ಎನ್‌ಐಸಿಯುಗೆ ಶಿಫ್ಟ್‌ ಮಾಡಲಾಗಿದೆ. ಬಳಿಕ ಮಗು ಮೃತಪಟ್ಟಿದೆ. ವೈದ್ಯೆ ನನ್ನ ಕಡೆಯಿಂದ ತಪ್ಪಾಗಿಲ್ಲ’ ಅಂತಾ ಹೇಳಿದ್ದಾರೆ. ಈ ಬಗ್ಗೆ ಆಂತರಿಕ ತನಿಖೆ ನಡೆಸಲಾಗುವುದು. ವರದಿ ಬಂದ ಬಳಿಕ ವೈದ್ಯೆಯ ನಿರ್ಲಕ್ಷ್ಯ ಕಂಡುಬಂದರೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಕೇಸ್‌ ಶೀಟ್‌ನಿಂದ ಎಲ್ಲವೂ ಗೊತ್ತಾಗಲಿದೆ ಎಂದರು.

--

ಚಿತ್ರ: ಕೆ.ಸಿ.ಜನರಲ್‌ ಆಸ್ಪತ್ರೆ