ಬೆಂಗಳೂರು ರೇವ್‌ ಪಾರ್ಟಿ: ತೆಲುಗು ನಟಿ ಹೇಮಾ ಸೆರೆ

| Published : Jun 04 2024, 01:30 AM IST / Updated: Jun 04 2024, 04:55 AM IST

Telugu Actress Hema Arrested
ಬೆಂಗಳೂರು ರೇವ್‌ ಪಾರ್ಟಿ: ತೆಲುಗು ನಟಿ ಹೇಮಾ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿಗೆ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ ನಡೆಸಿ ತೆಲಗು ಚಿತ್ರರಂಗದ ನಟಿ ಹೇಮಾ ಅವರನ್ನು ಬಂಧಿಸಿದೆ.

 ಬೆಂಗಳೂರು :  ಇತ್ತೀಚಿಗೆ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ ನಡೆದಾಗ ತಾನು ಪಾರ್ಟಿಯಲ್ಲಿ ಇರಲಿಲ್ಲ ಹೈದ್ರಾಬಾದ್‌ನಲ್ಲಿದ್ದೇನೆ ಎಂದು ಹೇಳಿ ಹುಸಿ ನಾಟಕವಾಡಿದ್ದಲ್ಲದೆ ತಪ್ಪು ಹೆಸರು ನೀಡಿ ತನಿಖೆ ದಿಕ್ಕು ತಪ್ಪಿಸಿಸಲು ಆರೋಪದ ಮೇರೆಗೆ ತೆಲುಗು ಚಿತ್ರರಂಗದ ಖ್ಯಾತ ಪೋಷಕ ನಟಿ ಹೇಮಾ ಅವರನ್ನು ಸೋಮವಾರ ಸಿಸಿಬಿ ಬಂಧಿಸಿದೆ.ರೇವ್ ಪಾರ್ಟಿ ಪ್ರಕರಣ ಸಂಬಂಧ ಸಿಸಿಬಿ ಎರಡನೇ ನೋಟಿಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಹೇಮಾ ಅವರನ್ನು ಸುದೀರ್ಘವಾಗಿ ಪ್ರಶ್ನಿಸಿದ ಬಳಿಕ ಸಂಜೆ ತನಿಖಾಧಿಕಾರಿ ಬಂಧನಕ್ಕೆ ಒಳಪಡಿಸಿದ್ದಾರೆ. 14ದಿನಗಳ ನ್ಯಾಯಾಂಗ ವಶಕ್ಕೆ ಹಾಜರುಪಡಿಸಿದೆ.

ತನ್ನ ಹೆಸರು ಕೃಷ್ಣವೇಣಿ ಎಂದಿದ್ದ ಹೇಮಾ:ರೇವ್ ಪಾರ್ಟಿ ಆಯೋಜಕ ವಾಸು ಹಾಗೂ ಆತನ ಸ್ನೇಹಿತರ ಜತೆ ನಟಿ ಹೇಮಾ ಅವರಿಗೆ ಆತ್ಮೀಯತೆ ಒಡನಾಟವಿತ್ತು. ಹೀಗಾಗಿ ಅದೂ ಯಾವ ರೀತಿಯ ಪಾರ್ಟಿ ಹಾಗೂ ಡ್ರಗ್ಸ್ ಪೂರೈಕೆ ಬಗ್ಗೆ ಅ‍ವರಿಗೆ ಖಚಿತ ಮಾಹಿತಿ ಇತ್ತು. ಅಲ್ಲದೆ ದಾಳಿ ನಡೆದಾಗ ತಾನು ಪಾರ್ಟಿಯಲ್ಲಿಲ್ಲವೆಂದು ಹೇಮಾ ಸುಳ್ಳು ವಿಡಿಯೋ ಹೇಳಿಕೆ ಕೊಟ್ಟಿದ್ದರು. ತಮ್ಮ ಹೆಸರು ಕೃಷ್ಣವೇಣಿ ಎಂದು ಸುಳ್ಳು ಹೇಳಿದ್ದ ಅ‍ವರು, ತಮ್ಮ ಮೊಬೈಲ್ ಸಂಖ್ಯೆ ಹಾಗೂ ಮನೆ ವಿಳಾಸವನ್ನು ಕೂಡ ತಪ್ಪಾಗಿ ನೀಡಿ ತನಿಖೆ ದಿಕ್ಕು ತಪ್ಪಿಸಲು ಯತ್ನಿಸಿದರು. ಈ ಮೂರು ಕಾರಣಗಳಿಗೆ ಹೇಮಾ ಅವರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮೇ.19 ರಂದು ಎಲೆಕ್ಟ್ರಾನಿಕ್‌ ಸಿಟಿ ಸಮೀಪ ಫಾರ್ಮ್‌ ಹೌಸ್‌ನಲ್ಲಿ ಆಂಧ್ರಪ್ರದೇಶ ರಾಜ್ಯದ ವಿಜಯವಾಡದ ವಾಸು ಎಂಬಾತನ ಹುಟ್ಟಹುಬ್ಬದ ನಿಮಿತ್ತ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ತೆಲುಗು ನಟಿಯರಾದ ಹೇಮಾ, ಆಶಿ ರಾಯ್ ಸೇರಿದಂತೆ 100ಕ್ಕೂ ಹೆಚ್ಚಿನ ಮಂದಿ ಪಾಲ್ಗೊಂಡಿದ್ದರು. 

ಈ ಪಾರ್ಟಿ ಬಗ್ಗೆ ಮಾಹಿತಿ ಪಡೆದ ಸಿಸಿಬಿ ದಿಢೀರ್ ದಾಳಿ ನಡೆಸಿ ಪಾರ್ಟಿಯಲ್ಲಿದ್ದವರನ್ನು ವಶಕ್ಕೆ ಪಡೆದಿತ್ತು.ಈ ದಾಳಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದ ಹಿನ್ನೆಲೆಯಲ್ಲಿ ತಮ್ಮ ಗೌರವ ಉಳಿಸಿಕೊಳ್ಳಲು ಹೇಮಾ ಸುಳ್ಳಿನ ನಾಟಕವಾಡಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ.ಫಾರ್ಮ್‌ ಹೌಸ್‌ನಲ್ಲಿ ಸಿಸಿಬಿ ದಾಳಿ ನಡೆಸಿ ಪರಿಶೀಲನೆ ಮುಂದುವರೆಸಿದ್ದಾಗಲೇ ದಿಢೀರನೇ ಸಾಮಾಜಿಕ ಜಾಲತಾಣಗಳ ಮೂಲಕ ಹೇಮಾ ಪ್ರತ್ಯಕ್ಷವಾಗಿದ್ದರು. 

ತಾನು ಪಾರ್ಟಿಯಲ್ಲಿಲ್ಲ. ಹೈದ್ರಾಬಾದ್‌ನಲ್ಲಿದ್ದೇನೆ ಎಂದು ಅ‍ವರು ವಿಡಿಯೋ ಹೇಳಿಕೆ ಬಿಡುಗಡೆಗೊಳಿಸಿದ್ದರು. ಆದರೆ ನಟಿ ಪಾರ್ಟಿಯಲ್ಲಿದ್ದ ಸಂಗತಿಯನ್ನು ಪೊಲೀಸ್ ಆಯುಕ್ತರು ಖಚಿತಪಡಿಸಿದ್ದರು.ಇನ್ನು, ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಸೇರಿದಂತೆ 86 ಮಂದಿ ಡ್ರಗ್ಸ್ ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ಖಚಿತವಾಗಿತ್ತು. ಈ ಹಿನ್ನಲೆಯಲ್ಲಿ ನಟಿ ಹೇಮಾ ಸೇರಿದಂತೆ 8 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿಗೊಳಿಸಿತ್ತು. ಆದರೆ ಎರಡು ಬಾರಿ ವಿಚಾರಣೆಗೆ ಕರೆದರೂ ವಿಚಾರಣೆಗೆ ಹಾಜರಾಗಲು ಹೇಮಾ ಹಿಂದೇಟು ಹಾಕುತ್ತಿದ್ದರು. ಕೊನೆಗೆ ಬಂಧಿಸುವ ಎಚ್ಚರಿಕೆ ನೀಡಿದ ಬಳಿಕ ಹೇಮಾ ತನಿಖಾಧಿಕಾರಿ ಮುಂದೆ ಹಾಜರಾದರು ಎಂದು ಮೂಲಗಳು ಹೇಳಿವೆ.

ಮತ್ತಿಬ್ಬರ ವಿಚಾರಣೆ:

ಇನ್ನು ಈ ರೇವ್ ಪಾರ್ಟಿ ಪ್ರಕರಣ ಸಂಬಂಧ ಆಂಧ್ರಪ್ರದೇಶ ಮೂಲದ ಮತ್ತಿಬ್ಬರನ್ನು ಸಿಸಿಬಿ ಸೋಮವಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ನೋಟಿಸ್ ಹಿನ್ನಲೆಯಲ್ಲಿ ಸಿಸಿಬಿ ಮುಂದೆ ಹೇಮಾ ಜತೆ ಮೂವರು ಹಾಜರಾಗಿದ್ದರು.

ಬುರ್ಖಾ ಹಾಕಿ ಬಂದ ಹೇಮಾ:

ಸಿಸಿಬಿ ವಿಚಾರಣೆಗೆ ಬಂದಾಗಲೂ ಮುಖ ಮುಚಿಕೊಳ್ಳಲು ನಟಿ ಹೇಮಾ ಅವರು ಬುರ್ಖಾ ಮೊರೆ ಹೋಗಿದ್ದರು. ಸಿಸಿಬಿ ವಿಚಾರಣೆಗೆ ಮಾಧ್ಯಮಗಳ ಕಣ್ತಪ್ಪಿಸಲು ಬುರ್ಖಾ ಧರಿಸಿಯೇ ಅವರು ಬಂದಿದ್ದು ಗಮನ ಸೆಳೆಯಿತು.

ಡ್ರಗ್ಸ್ ಪೂರೈಕೆದಾರ ಸೆರೆ:ಈ ಪಾರ್ಟಿಗೆ ಡ್ರಗ್ಸ್ ಪೂರೈಸಿದ್ದ ಆರೋಪದ ಮೇರೆಗೆ ಆಂಧ್ರಪ್ರದೇಶ ಮೂಲದ ಷರೀಪ್‌ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಈ ಪಾರ್ಟಿ ಮೇಲೆ ದಾಳಿ ವೇಳೆ ಎಂಡಿಎಂಎ ಹಾಗೂ ಗಾಂಜಾ ಜಪ್ತಿಯಾಗಿತ್ತು.