ಮರದ ರೆಂಬೆ - ಕೊಂಬೆಯಿಂದ ಗಾಯಗೊಂಡ ಜನ ಸಾಮಾನ್ಯರಿಗೆ ಚಿಕಿತ್ಸೆ ದೊರಕಿಸಿಕೊಡುವುದಕ್ಕೆ ‘ಬಿಬಿಎಂಪಿ ವಿಮೆ’ ಸೌಲಭ್ಯ

| N/A | Published : Apr 05 2025, 01:45 AM IST / Updated: Apr 05 2025, 04:40 AM IST

ಮರದ ರೆಂಬೆ - ಕೊಂಬೆಯಿಂದ ಗಾಯಗೊಂಡ ಜನ ಸಾಮಾನ್ಯರಿಗೆ ಚಿಕಿತ್ಸೆ ದೊರಕಿಸಿಕೊಡುವುದಕ್ಕೆ ‘ಬಿಬಿಎಂಪಿ ವಿಮೆ’ ಸೌಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮರದ ರೆಂಬೆ-ಕೊಂಬೆಯಿಂದ ಗಾಯಗೊಳ್ಳುವ ಜನ ಸಾಮಾನ್ಯರಿಗೆ ವೈದ್ಯಕೀಯ ಚಿಕಿತ್ಸೆ ದೊರಕಿಸಿಕೊಡುವುದಕ್ಕೆ ಬಿಬಿಎಂಪಿಯು ವಿಮೆ ಸೌಲಭ್ಯ ಕಲ್ಪಿಸುವುದಕ್ಕೆ ತಯಾರಿ ನಡೆಸಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ಮರದ ರೆಂಬೆ-ಕೊಂಬೆಯಿಂದ ಗಾಯಗೊಳ್ಳುವ ಜನ ಸಾಮಾನ್ಯರಿಗೆ ವೈದ್ಯಕೀಯ ಚಿಕಿತ್ಸೆ ದೊರಕಿಸಿಕೊಡುವುದಕ್ಕೆ ಬಿಬಿಎಂಪಿಯು ವಿಮೆ ಸೌಲಭ್ಯ ಕಲ್ಪಿಸುವುದಕ್ಕೆ ತಯಾರಿ ನಡೆಸಿದೆ.

ಬೆಂಗಳೂರಿನಲ್ಲಿ ಸಣ್ಣ ಮಳೆ-ಗಾಳಿಗೂ ಒಣಗಿದ ಮರ ಹಾಗೂ ಮರದ ರೆಂಬೆ-ಕೊಂಬೆಗಳು ಮಾತ್ರವಲ್ಲದೇ, ಹಸಿ-ಹಸಿ ಮರದ ರೆಂಬೆ-ಕೊಂಬೆಗಳೇ ಏಕಾಏಕಿ ಧರೆಗುರುಳುತ್ತವೆ. ಈ ಸಂದರ್ಭದಲ್ಲಿ ಸಾಕಷ್ಟು ಮಂದಿ ಗಾಯಗೊಂಡ ಉದಾರಣೆಗಳಿವೆ. ಕಳೆದ ಒಂದೇ ವರ್ಷದಲ್ಲಿ ಈ ರೀತಿ ಅನಾಹುತ ಉಂಟಾಗಿ ಇಬ್ಬರು ಮರಣ ಹೊಂದಿ, 17 ಜನರಿಗೆ ಗಾಯಗೊಂಡಿದ್ದಾರೆ.

ಮೃತಪಟ್ಟವರಿಗೆ ವಿಪತ್ತು ನಿರ್ವಹಣೆ ನಿಧಿಯಿಂದ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ಆದರೆ, ಗಾಯಗೊಂಡ ಆಸ್ಪತ್ರೆಗೆ ದಾಖಲಾದ ಸಂತ್ರಸ್ತರ ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸುವುದಕ್ಕೆ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದು, ಇದರಿಂದ ಸಂತ್ರಸ್ತರು ಬಿಬಿಎಂಪಿ ಕಚೇರಿ ಅಲೆಯ ಬೇಕಾಗಲಿದೆ.

ಇನ್ನು ಚಿಕಿತ್ಸೆಯ ವೆಚ್ಚವಾಗಿ ಲಕ್ಷಾಂತರ ರುಪಾಯಿ ಭರಿಸುವುದಕ್ಕೆ ಸಿಜಿಎಚ್‌ಎಸ್‌ ನಿಯಮಗಳು ಅಡ್ಡಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ದೊರಕಿಸಿಕೊಡುವುದಕ್ಕೆ ವಿಮಾ ಮೊರೆ ಹೋಗುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ.

ಕಳೆದ ವರ್ಷ ಮರ ಬಿದ್ದು ಗಾಯಗೊಂಡವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು ₹25 ಲಕ್ಷ ವೈದ್ಯಕೀಯ ವೆಚ್ಚವಾಗಿತ್ತು. ಆದರೆ, ಬಿಬಿಎಂಪಿಯು ಸಿಜಿಎಚ್‌ಎಸ್‌ ನಿಯಮದ ಪ್ರಕಾರ ಸುಮಾರು ₹4 ಲಕ್ಷ ಮಾತ್ರ ನೀಡುವುದಕ್ಕೆ ಸಾಧ್ಯ ಎಂದಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್‌ ₹19 ಲಕ್ಷ ವೈದ್ಯಕೀಯ ವೆಚ್ಚ ಭರಿಸುವಂತೆ ಬಿಬಿಎಂಪಿಗೆ ನಿರ್ದೇಶಿಸುವುದರೊಂದಿಗೆ ವೈದ್ಯಕೀಯ ವಿಮೆ ಸೌಲಭ್ಯ ಮಾಡುವಂತೆ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ವಿಮೆ ಸೌಲಭ್ಯ ಆರಂಭಿಸುವ ಕಸರತ್ತನ್ನು ಬಿಬಿಎಂಪಿ ಶುರು ಮಾಡಿದೆ.

ಅರಣ್ಯ ಇಲಾಖೆಯ ಮಾದರಿ?:

ವಿಮಾ ಸೌಲಭ್ಯ ನೀಡುವುದಕ್ಕೆ ನಿರ್ದಿಷ್ಟ ಸಂಖ್ಯೆ ಇರಬೇಕು. ಆದರೆ, ಯಾರು ಅನಾಹುತಕ್ಕೆ ತುತ್ತಾಗಲಿದ್ದಾರೆ, ಎಷ್ಟು ಮಂದಿ ತುತ್ತಾಗಲಿದ್ದಾರೆ ಎಂಬುದರ ಬಗ್ಗೆ ಅಂದಾಜು ಮಾಡುವುದಕ್ಕೆ ಸಾಧ್ಯವಿಲ್ಲ. ಈ ಸಮಸ್ಯೆ ಇರುವುದರಿಂದ ವಿಮಾ ಕಂಪನಿಗಳು ವೈದ್ಯಕೀಯ ವಿಮೆ ನೀಡುವುದಕ್ಕೆ ಮುಂದೆ ಬರುವುದಕ್ಕೆ ಆಸಕ್ತಿ ತೋರುವುದಿಲ್ಲ. ಆದರೆ, ಕಾಡು ಪ್ರಾಣಿಗಳಾದ ಆನೆ, ಕರಡಿ, ಚಿರತೆ ಸೇರಿದಂತೆ ಮೊದಲಾದವುಗಳ ದಾಳಿಯಿಂದ ಗಾಯಗೊಂಡವರಿಗೆ ಚಿಕಿತ್ಸೆ ವೆಚ್ಚ ಭರಿಸುವುದಕ್ಕೆ ಅರಣ್ಯ ಇಲಾಖೆಯಲ್ಲಿ ವಿಮಾ ವ್ಯವಸ್ಥೆ ಮಾಡಲಾಗಿದೆ. ಆ ಮಾದರಿಯನ್ನು ಬಳಕೆ ಮಾಡಿಕೊಂಡು ಮರ ಬಿದ್ದು ಗಾಯಗೊಂಡವರ ಚಿಕಿತ್ಸೆಗೆ ವೈದ್ಯಕೀಯ ವೆಚ್ಚ ಭರಿಸುವ ಆಲೋಚನೆಯನ್ನು ಬಿಬಿಎಂಪಿ ಹಾಕಿಕೊಂಡಿದೆ. 

ನಾಡಿದ್ದು ವಿಮೆ ಕಂಪನಿಗಳ ಸಭೆ

ವಿಮಾ ಸೌಲಭ್ಯ ಒದಗಿಸುವ ಬಗ್ಗೆ ಸೋಮವಾರ ಬಿಬಿಎಂಪಿಯ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿದೆ. ಸುಮಾರು 15ಕ್ಕೂ ಅಧಿಕ ವಿಮಾ ಕಂಪನಿಯ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ. 

ಬಿಬಿಎಂಪಿಯ ಪ್ಲಾನ್‌ ಹೇಗೆ?

ವಿಮೆ ಒದಗಿಸುವುದಕ್ಕೆ ಮುಂದೆ ಬರುವ ವಿಮಾ ಕಂಪನಿಗೆ ಬಿಬಿಎಂಪಿಯು ಇಂತಿಷ್ಟು ಕೋಟಿ ರುಪಾಯಿ ಠೇವಣಿ ಮಾಡುವುದು. ನಗರದಲ್ಲಿ ಮರ ಬಿದ್ದು ಗಾಯಗೊಂಡವರು ಯಾವುದೇ ಆಸ್ಪತ್ರೆಗೆ ದಾಖಲಾದರೂ ಅವರ ವೈದ್ಯಕೀಯ ವೆಚ್ಚವನ್ನು ಭರಿಸುವುದು. ಇದರಿಂದ ಸಂತ್ರಸ್ತರಿಗೆ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂಬುದು ಬಿಬಿಎಂಪಿಯ ಅಧಿಕಾರಿಗಳ ಚಿಂತನೆ ಆಗಿದೆ.