ಸಾರಾಂಶ
ಲಕ್ಷ್ಮೇಶ್ವರ: ತಾಲೂಕಿನ ಹಲವು ಗ್ರಾಮಗಳ ಕೊಳವೆಬಾವಿಗಳು ನೀರಿಲ್ಲದೆ ಬತ್ತಿ ಹೋಗಿದ್ದು, ರೈತರು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಶೇಂಗಾ, ಅಲಸಂದಿ, ಗೋವಿನ ಜೋಳ ಒಣಗಿ ಹೋಗುತ್ತಿವೆ. ಆದ್ದರಿಂದ ಹಿಂಗಾರು ಹಂಗಾಮಿನ ಬೆಳೆಗಳಿಗೆ ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಅಜಯ ಕರಿಗೌಡರ ಒತ್ತಾಯಿಸಿದ್ದಾರೆ.
ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ತಾಲೂಕಿನ ದೊಡ್ಡೂರು, ಸೂರಣಗಿ, ಉಳ್ಳಟ್ಟಿ, ಉಂಡೇನಹಳ್ಳಿ, ಶ್ಯಾಬಳ, ಶಿಗ್ಲಿ, ಗೋವನಾಳ, ಮುನಿಯನ ತಾಂಡಾ, ದೊಡ್ಡೂರು ತಾಂಡಾ, ಸುವರ್ಣಗಿರಿ, ಅಡರಕಟ್ಟಿ, ಲಕ್ಷ್ಮೇಶ್ವರ, ಹರದಗಟ್ಟಿ, ಹಿರೇಮಲ್ಲಾಪುರ, ವಡೆಯರ ಮಲ್ಲಾಪುರ, ಗುಲಗಂಜಿಕೊಪ್ಪ, ರಾಮಗೇರಿ, ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ ಈ ಗ್ರಾಮಗಳಲ್ಲಿನ ನೀರಾವರಿ ಜಮೀನುಗಳಲ್ಲಿರುವ ಕೊಳವೆಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಇದರಿಂದ ಪ್ರಮುಖ ಬೆಳೆಗಳಾದ ಶೇಂಗಾ, ಅಲಸಂದಿ, ಜೋಳ, ಗೋದಿ ಇವುಗಳು ಸಂಪೂರ್ಣ ಹಾಳಾಗಿವೆ. ರೈತರು ಎಕರೆಗೆ ಸುಮಾರು ₹30-35 ಸಾವಿರಗಳ ಸಾಲ ಮಾಡಿ, ಕೈಗಡ ಹಣ ಪಡೆದು ಖರ್ಚು ಮಾಡಿದ್ದಾರೆ. ಈಗ ರೈತರು ಕಂಗಾಲಾಗಿದ್ದು, ದಿಕ್ಕು ತೋಚದಂತಾಗಿದೆ. ಕಾರಣ ಬೆಳೆ ಹಾನಿಯಾದ ಬಗ್ಗೆ ಸರ್ಕಾರದಿಂದ ಸೂಕ್ತ ಬೆಳೆ ಪರಿಹಾರ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ಲಕ್ಷ್ಮಣ ಲಮಾಣಿ ಮಾತನಾಡಿ, ಕೊಳವೆಬಾವಿಗಳು ಬತ್ತಿ ಹೋಗಿರುವುದರಿಂದ ರೈತರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕ ಪ್ರಮಾಣದ ಬೇಸಿಗೆ ಇರುವುದರಿಂದ ಹೊಲದಲ್ಲಿನ ಬೆಳೆಗಳು ಒಣಗಿ ಹೋಗುತ್ತಿವೆ. ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ ಬೆಳೆ ವಿಮೆ, ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಗಂಗಾಧರ ಬಂಕಾಪುರ, ಸುರೇಶ ಬಾಗಲದ, ಅಲ್ತಾಫ ನೂರಬೇಗ ಮಿರ್ಜಾ, ದಾದಾಪೀರ ನೂರಬೇಗ ಮಿರ್ಜಾ, ಮಲ್ಲಿಕಾರ್ಜುನ ಗೊರವರ, ರಾಮಪ್ಪ ಲಮಾಣಿ, ನಿಂಗನಗೌಡ್ರ ಪಾಟೀಲ, ರಮೇಶ ಹುಲಕೋಟಿ, ರಮೇಶ ಕೋಳಿವಾಡ, ಮಹಾಲಿಂಗಪ್ಪ ನಾದಿಗಟ್ಟಿ, ಶಿವಮೂರ್ತೆಪ್ಪ ಈಳಿಗೇರ, ಚಂದ್ರಗೌಡ ಕರೆಗೌಡ್ರ, ವಸಂತಗೌಡ್ರ ಕರೆಗೌಡ್ರ, ಮುಕ್ತಿಯಾರ್ ನೂರ ಮಿರ್ಜಾ ಇದ್ದರು.