ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದ್ವಿಚಕ್ರ ವಾಹನದಲ್ಲಿ ಮೃತ ವ್ಯಕ್ತಿಗೆ ₹15 ಲಕ್ಷ ವಿಮೆ ಹಾಗೂ ದೂರು ದಾಖಲಾದ ದಿನದಿಂದ ಈ ಮೊತ್ತಕ್ಕೆ ಶೇ.8ರ ಬಡ್ಡಿ ಸೇರಿಸಿ ಪರಿಹಾರ ನೀಡುವಂತೆ ಬಾಗಲಕೋಟೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.ಗುಳೇದಗುಡ್ಡ ತಾಲೂಕಿನ ಕೋಟಿಕಲ್ ಗ್ರಾಮದ ನಿವಾಸಿ ಮಹಾನಿಂಗ ಜಾಲಿಹಾಳ 2024ರ ಫೆಬ್ರವರಿ 16ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಕುರಿತು ಬದಾಮಿ ಪೊಲೀಸ್ ಠಾಣೆಯಲ್ಲಿ ಮೃತನ ಪತ್ನಿ ಸವಿತಾ ದೂರು ನೀಡಿದ್ದರು. ವಾಹನಕ್ಕೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ₹15 ಲಕ್ಷ ಮೊತ್ತದ ವೈಯಕ್ತಿಕ ಅಪಘಾತ ವಿಮೆ ಪಾಲಿಸಿ ಮಾಡಿಸಿದ್ದು, ವಿಮೆ ಪರಿಹಾರ ನೀಡುವಂತೆ ಮೃತನ ಪತ್ನಿ ಹಾಗೂ ಮಕ್ಕಳು ವಿಮಾ ಕಂಪನಿಗೆ ಕ್ಲೇಮ್ ಮಾಡಿದ್ದರು. ಆದರೆ ವಿಮಾ ಕಂಪನಿ ದೂರುದಾರರ ಕೋರಿಕೆ ಇತ್ಯರ್ಥಪಡಿಸದೆ ನಿರ್ಲಕ್ಷಿಸಿತ್ತು. ವಿಮಾ ಕಂಪನಿಯ ಈ ನಡೆ ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಬಾಗಲಕೋಟೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕಶವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಪ್ರಭುಲಿಂಗಸ್ವಾಮಿ ಹಿರೇಮಠ ಮತ್ತು ಸಿ.ಎಚ್. ಸಮಿಉನ್ನಿಸಾ ಅಬ್ರಾರ್ ದೂರುದಾರರ ಪತಿ ಮೃತ ಮಹಾನಿಂಗ ವೈಯಕ್ತಿಕ ಅಪಘಾತ ವಿಮೆ ಸೌಲಭ್ಯಕ್ಕೆ ಒಳಪಟ್ಟಿದ್ದು, ಅಪಘಾತವಾದ ದಿನದಂದು ವಿಮಾ ಪಾಲಿಸಿ ಚಾಲ್ತಿಯಲ್ಲಿತ್ತು. ಪಾಲಿಸಿ ನಿಯಮದಂತೆ ದೂರುದಾರರು ಕಂಪನಿಗೆ ಕ್ಲೇಮ್ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಮೃತರ ವಾರಸುದಾರರಿಗೆ ವಿಮಾ ಮೊತ್ತ ₹15 ಲಕ್ಷ ಕೊಡಬೇಕಾಗಿರುವುದು ವಿಮಾ ಕಂಪನಿಯವರ ಕರ್ತವ್ಯ. ದೂರುದಾರರಿಗೆ ವಿಮಾ ಕ್ಲೇಮ್ ಕೊಡದೆ ಇರುವುದು ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗಲಿದೆ ಎಂದು ಅಭಿಪ್ರಾಯಪಟ್ಟ ಆಯೋಗ ಈ ತೀರ್ಪು ನೀಡಿದೆ.ತೀರ್ಪು ನೀಡಿ 45 ದಿನಗಳೊಳಗಾಗಿ ₹15 ಲಕ್ಷ ಹಾಗೂ ಆ ಮೊತ್ತಕ್ಕೆ ಶೇ.8ರಂತೆ ದೂರು ದಾಖಲಾದ 2024ರ ಸೆಪ್ಟೆಂಬರ್ 18ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಹಾಕಿ ಕೊಡುವಂತೆ ಆಯೋಗ ಆದೇಶಿಸಿದೆ. ಜೊತೆಗೆ ದೂರುದಾರರಿಗೆ ಆಗಿರುವ ಮಾನಸಿಕ ಹಿಂಸೆ ಮತ್ತು ಅನಾನುಕೂಲಕ್ಕಾಗಿ ₹25 ಸಾವಿರ ಪರಿಹಾರ ಮತ್ತು ದೂರಿನ ಖರ್ಚು ₹10 ಸಾವಿರ ಕೊಡಬೇಕೆಂದು ಯುನೈಟೆಡ್ ಇಂಡಿಯಾ ಇನ್ನೂರೆನ್ಸ್ ಕಂಪನಿಗೆ ಆಯೋಗ ನಿರ್ದೇಶಿಸಿದೆ.