ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಹಿಯನ್ನೇ ನಕಲು ಮಾಡಿ ನಕಲಿ ನೇಮಕಾತಿ ಆದೇಶ ಸೃಷ್ಟಿಸಿದ ಆಸಾಮಿಯೊಬ್ಬ ಇಬ್ಬರಿಗೆ 31 ಲಕ್ಷ ರು. ವಂಚಿಸಿದ್ದಾನೆ. ಆತನ ವಿರುದ್ಧ ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಂಡ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಹಿಯನ್ನೇ ನಕಲು ಮಾಡಿ ನಕಲಿ ನೇಮಕಾತಿ ಆದೇಶ ಸೃಷ್ಟಿಸಿದ ಆಸಾಮಿಯೊಬ್ಬ ಇಬ್ಬರಿಗೆ 31 ಲಕ್ಷ ರು. ವಂಚಿಸಿದ್ದಾನೆ. ಆತನ ವಿರುದ್ಧ ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಂಡ್ಯ ಗಾಂಧಿನಗರದ ನೇತ್ರಾವತಿ ಹಾಗೂ ಕಲ್ಲಹಳ್ಳಿಯ ಮಲ್ಲೇಶ್ ಅವರೇ ವಂಚನೆಗೊಳಗಾದವರಾಗಿದ್ದು, ಮಂಡ್ಯ ತಾವರೆಗೆರೆ ನಿವಾಸಿ ಎಚ್.ಸಿ.ವೆಂಕಟೇಶ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ.
ಎಚ್.ಸಿ.ವೆಂಕಟೇಶ್ ಬೆಂಗಳೂರಿನ ವಿಧಾನ ಸೌಧದಲ್ಲಿ ಕೆಲಸದಲ್ಲಿರುವುದಾಗಿ ನಂಬಿಸಿ ಒಬ್ಬರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕೆಲಸ ಕೊಡಿಸುವುದಾಗಿ ೧೨.೨೪ ಲಕ್ಷ ರು. ಹಾಗೂ ವಾಣಿಜ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿ ಕೆಲಸ ಕೊಡಿಸುವುದಾಗಿ ಇನ್ನೊಬ್ಬರಿಂದ ೧೯ ಲಕ್ಷ ರು. ಪಡೆದು ವಂಚಿಸಿದ್ದಾನೆಂದು ಆರೋಪಿಸಲಾಗಿದೆ.
ಪ್ರಕರಣವೇನು?
ನೇತ್ರಾವತಿ ಎಂಬುವರಿಗೆ ಇಬ್ಬರು ಗಂಡು ಮಕ್ಕಳಿದ್ದು ಇಬ್ಬರೂ ಸಹ ವಿದ್ಯಾವಂತರು. ಅವರಿಗೆ ಶಿಕ್ಷಕ ನೀಲಕಂಠಾಚಾರ್ ಮೂಲಕ ತಾವರೆಗೆರೆಯ ಎಚ್.ಸಿ.ವೆಂಕಟೇಶ್ ಪರಿಚಯವಾಗಿದ್ದರು, ತಾನು ಬೆಂಗಳೂರಿನ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವುದಾಗಿ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳು ಪರಿಚಯವಿದ್ದಾರೆ. ನಾನು ನಿಮ್ಮ ಮಗ ಎನ್.ದರ್ಶನ್‌ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದೇರ್ಶಕರ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದನೆಂದು ಹೇಳಿದ್ದಾರೆ.
ಮಗನಿಗೆ ಉದ್ಯೋಗ ಸಿಗುವುದೆಂಬ ಆಸೆಗೆ ಹಣದ ಬಗ್ಗೆ ಕೇಳಿದಾಗ ೧೫ ಲಕ್ಷ ರು. ಹಣ ಖರ್ಚಾಗುತ್ತದೆ. ಹಣಕ್ಕೆ ನೀವು ಹೆದರುವ ಅವಶ್ಯಕತೆ ಇಲ್ಲ. ನನ್ನ ಬ್ಯಾಂಕ್ ಅಂಕೌಂಟ್ ನಂಬರ್ ಕೊಡುತ್ತೇನೆ. ಅಕೌಂಟ್‌ಗೆ ದುಡ್ಡು ಹಾಕಿ ಎಂದು ಮನವೊಲಿಸಿದನು. ಅವನ ಮಾತನ್ನು ನಂಬಿ ಒಪ್ಪಿಕೊಂಡು ಮಗನ ವಿದ್ಯಾಭ್ಯಾಸದ ನಕಲು ಅಂಕಪಟ್ಟಿ ಪ್ರತಿಯನ್ನು ವಾಟ್ಸಾಪ್ ಮುಖಾಂತರ ವೆಂಕಟೇಶ್ ರವರ ಮೊಬೈಲ್ (೯೮೮೬೧೨೪೮೧೨)ಗೆ ಕಳುಹಿಸಿದರು.
ಆತನ ಬ್ಯಾಂಕ್‌ನ ವಿವಿಧ ಬ್ಯಾಂಕ್ ಖಾತೆಗೆ ನನ್ನ ಮತ್ತು ನನ್ನ ಸ್ನೇಹಿತರ ಖಾತೆಯಿಂದ ಒಟ್ಟು ೯,೨೪,೦೦೦ ರು.ಗಳನ್ನು ಬ್ಯಾಂಕ್ ಖಾತೆ ಮುಖಾಂತರ ಪಡೆದಿದ್ದು, ನನ್ನ ಕೈಯಿಂದ ಕಚೇರಿ ಖರ್ಚಿಗೆಂದು ಅವನ ಮನೆಯಲ್ಲೇ ೩ ಲಕ್ಷ ರು. ಸೇರಿ ೧೨.೨೪ ರು. ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಮಗನಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಹುದ್ದೆಗೆ ಸ್ಥಳ ನಿಯೋಜಿಸಿದ ಆದೇಶದ ಪ್ರತಿಯನ್ನು ಸರ್ಕಾರಿ ಅಧಿಕಾರಿಗಳ ಪೋರ್ಜರಿ ಸಹಿ ಮಾಡಿ ಸುಳ್ಳು ನೇಮಕಾತಿ ದಾಖಲಾತಿಯನ್ನು ಸೃಷ್ಟಿ ಮಾಡಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕಲ್ಲಹಳ್ಳಿಯ ಮಲ್ಲೇಶ್ ಅವರಿಗೆ ಎಚ್.ಸಿ.ವೆಂಕಟೇಶ್ ಪರಿಚಯವಾಗಿ ಒಂದೆರಡು ಬಾರಿ ತಾವರೆಗೆರೆಯಲ್ಲಿರುವ ವೆಂಕಟೇಶ್ ಮನೆಗೆ ಹೋಗಿದ್ದರು. ಆ ವೇಳೆ ನಿನ್ನ ಪತ್ನಿ ಎಲ್ಲಿಯವರೆಗೆ ಓದಿದ್ದಾರೆ ಎಂದು ವೆಂಕಟೇಶ್ ಕೇಳಿದಾಗ ಎಂ.ಎ. ಡಬಲ್ ಡಿಗ್ರಿ ಓದಿರುವುದಾಗಿ ತಿಳಿಸಿದರು. ಆಗ ವೆಂಕಟೇಶ್ ತಾನು ವಿಧಾನಸೌಧದಲ್ಲಿ ಸಿಇಒ ಆಗಿ ಕೆಲಸ ಮಾಡುತ್ತಿರುವುದಾಗಿ ಸರ್ಕಾರದಿಂದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೇರ ನೇಮಕಾತಿ ಮುಖಾಂತರ ಸೀನಿಯರ್ ಅಕೌಂಟೆಂಟ್ ಹಿರಿಯ ಲೆಕ್ಕಾಧಿಕಾರಿ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದು ತನಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಪರಿಚಯವಿದ್ದಾರೆ. ಅನೇಕ ಜನರಿಗೆ ಕೆಲಸ ಕೊಡಿಸಿದ್ದೇನೆ. ನೀವು ಹಣ ಖರ್ಚು ಮಾಡಿದರೆ ಲಂಚ ನೀಡಿ ನಿನ್ನ ಹೆಂಡತಿಗೆ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದನು.
ಆತನ ಮಾತನ್ನು ನಂಬಿ ಮಲ್ಲೇಶ್ ತಮ್ಮ ಪತ್ನಿಯ ವಿದ್ಯಾಭ್ಯಾಸದ ದಾಖಲೆಗಳ ಜೆರಾಕ್ಸ್‌ಗಳನ್ನು ನೀಡಿದರು. ನಂತರ ಹಂತ ಹಂತವಾಗಿ ವೆಂಕಟೇಶನ ಖಾತೆಗೆ ೧೯ ಲಕ್ಷ ರು. ಹಣ ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ನಂತರ ವೆಂಕಟೇಶ್ ಸರ್ಕಾರದ ಅಧೀನ ಕಾರ್ಯದರ್ಶಿರವರ ಸಹಿ, ಸ್ಥಳ ನಿಯೋಜನೆ ಸಂಬಂಧ ಅಧಿಕೃತ ಆದೇಶ ಪ್ರತಿ, ಜಿಲ್ಲಾಧಿಕಾರಿಗಳ ಪರವಾಗಿ ಎಂದು ಸಹಿ ಇರುವ ಕಂದಾಯ ಇಲಾಖೆಯ ಪತ್ರ, ಹಿರಿಯ ಲೆಕ್ಕಾಧಿಕಾರಿಗಳ ಸಹಿ ಇರುವ ಪತ್ರ, ಸಿಎಂ ಸಿದ್ದರಾಮಯ್ಯರವರ ಸಹಿ ಇರುವ ಟಿಪ್ಪಣಿ, ಮಹಾ ನಿರ್ದೇಶಕರ ಪರವಾಗಿ ಎಂದು ಸಹಿ ಇರುವ ಪತ್ರಗಳನ್ನು ಮಲ್ಲೇಶ್ ಪತ್ನಿ ಮೊಬೈಲ್‌ಗೆ ಕಳುಹಿಸಿದನು ಎಂದು ತಿಳಿಸಿದ್ದಾರೆ.
ಬಳಿಕ ಒಂದು ತಿಂಗಳಾದರೂ ವೆಂಕಟೇಶ್ ಡ್ಯೂಟಿ ರಿಪೋರ್ಟ್ ಮಾಡಿಸದಿದ್ದರಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಅವನು ವ್ಯಾಟ್ಸ್ ಅಪ್‌ನಲ್ಲಿ ಕಳುಹಿಸಿದ್ದ ಎಲ್ಲಾ ದಾಖಲೆಗಳನ್ನು ತೋರಿಸಿದಾಗ ಅವೆಲ್ಲಾ ಸುಳ್ಳು ದಾಖಲೆಗಳೆಂಬುದು ತಿಳಿಯಿತು.
ಹಣ ಕೊಟ್ಟು ವಂಚನೆಗೊಳಗಾಗಿ ಬೆಸ್ತುಬಿದ್ದ ಮಲ್ಲೇಶ್ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.