ಸಾರಾಂಶ
ಬೆಂಗಳೂರು : ಏಕಾಏಕಿ ತೆರೆದ ಕಾರಿನ ಬಾಗಿಲಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಮಹಿಳೆ ತಲೆ ಮೇಲೆ ಬಿಎಂಟಿಸಿ ಬಸ್ ಚಕ್ರ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯದ ಸರೋಜಾ (50) ಮೃತ ದುರ್ದೈವಿ. ಶನಿವಾರ ರಾತ್ರಿ ಸುಮಾರು 9.45ಕ್ಕೆ ಮೈಸೂರು ರಸ್ತೆಯ ಪಂತರಪಾಳ್ಯ ಪೂರ್ಣಿಮಾ ಟಿಂಬರ್ ಎದುರು ಈ ಘಟನೆ ನಡೆದಿದೆ. ಸರೋಜಾ ಮತ್ತು ಆಕೆಯ ಸಹೋದರ ರಾತ್ರಿ ಜ್ಞಾನಭಾರತಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಾಸ್ ಹೋಗುತ್ತಿದ್ದರು. ಈ ವೇಳೆ ಪಂತರಪಾಳ್ಯದ ಪೂರ್ಣಿಮಾ ಟಿಂಬರ್ ಎದುರು ನಿಲುಗಡೆ ಮಾಡಿದ್ದ ಕಾರಿನ ಬಾಗಿಲನ್ನು ಚಾಲಕ ಏಕಾಏಕಿ ತೆರೆದಿದ್ದಾನೆ. ಆಗ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ, ಕಾರಿನ ಬಾಗಿಲಿಗೆ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ.
ಇದೇ ಸಮಯಕ್ಕೆ ಹಿಂದಿನಿಂದ ಬರುತ್ತಿದ್ದ ಬಿಎಂಟಿಸಿ ಬಸ್‌ನ ಚಕ್ರಗಳು ಸರೋಜಾ ಅವರ ತಲೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹೋದರನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕ ಮತ್ತು ಬಿಎಂಟಿಸಿ ಬಸ್ ಚಾಲಕ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.