ಸಾರಾಂಶ
ಬೆಂಗಳೂರು : ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿಯಾಗಿ ಸೋದರರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಅಶೋಕ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಸುಕಿನಲ್ಲಿ ನಡೆದಿದೆ.
ನೀಲಸಂದ್ರ ನಿವಾಸಿಗಳಾದ ಶೇಕ್ ಅಸ್ಲಾಂ ಬಶೀರ್ (23) ಹಾಗೂ ಶೇಕ್ ಶಕೀಲ್ ಬಶೀರ್ (22) ಮೃತ ದುರ್ದೈವಿಗಳು. ಈ ಸೋದರರು ಬಜಾರ್ ಸ್ಟ್ರೀಟ್‌ನಲ್ಲಿರುವ ತಮ್ಮ ಹೋಟೆಲ್ ವಹಿವಾಟು ಮುಗಿಸಿ ನಸುಕಿನ 4.45ರ ಸುಮಾರಿಗೆ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಆನೇಪಾಳ್ಯ ಜಂಕ್ಷನ್ ಬಳಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಕುಟುಂಬದ ಜತೆ ನೀಲಸಂದ್ರದಲ್ಲಿ ನೆಲೆಸಿದ್ದ ಬಶೀರ್ ಸೋದರರು, ಬಜಾರ್ ಸ್ಟ್ರೀಟ್‌ನಲ್ಲಿ ಒಟ್ಟಿಗೆ ಸೋದರರು ಹೋಟೆಲ್ ನಡೆಸುತ್ತಿದ್ದರು. ಪ್ರತಿ ದಿನ ಮಧ್ಯರಾತ್ರಿವರೆಗೆ ವಹಿವಾಟು ನಡೆಸಿ ಅವರು ಮನೆಗೆ ಮರಳುತ್ತಿದ್ದರು. ಅಂತೆಯೇ ಗುರುವಾರ ನಸುಕಿನ 4.45ರ ಸುಮಾರಿಗೆ ಹೋಟೆಲ್ ಬಾಗಿಲು ಬಂದ್ ಮಾಡಿ ಬೈಕ್‌ನಲ್ಲಿ ಅಣ್ಣ-ತಮ್ಮ ಮನೆಗೆ ಮರಳುತ್ತಿದ್ದರು. ಈ ವೇಳೆ ಬೈಕ್ ಓಡಿಸುತ್ತಿದ್ದ ಶೇಕ್ ಬಶೀರ್, ಆನೇಪಾಳ್ಯ ಜಂಕ್ಷನ್ ಸಮೀಪ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಗುದ್ದಿಸಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ತಲೆಗೆ ಪೆಟ್ಟಾಗಿ ಸೋದರರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.