ಸಾರಾಂಶ
ಆರು ಮಂದಿ ಸ್ನೇಹಿತರೊಂದಿಗೆ ಮೂರು ಬೈಕ್‌ಗಳಲ್ಲಿ ತುಮಕೂರಿನಿಂದ ಚನ್ನಪಟ್ಟಣದ ಡಾಬಾವೊಂದಕ್ಕೆ ಮಾಂಸದೂಟ ಮಾಡಲು ಬರುತ್ತಿದ್ದಾಗ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ; ಇಬ್ಬರು ಸಾವು, ಸಾವಿನ ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ನವೀನ್‌ಕುಮಾರ್ ತೀವ್ರ ಹೃದಯಾಘಾತದಿಂದ ಅಸ್ವಸ್ಥ.
ಕನ್ನಡಪ್ರಭ ವಾರ್ತೆ ಮದ್ದೂರು
ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದು ತುಮಕೂರು ಮೂಲದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲನಕುಪ್ಪೆ ಗೇಟ್ ಹಾಗೂ ಚನ್ನಪಟ್ಟಣ ರಸ್ತೆ ಸಿದ್ದನಹಳ್ಳಿ ಬಳಿ ಭಾನುವಾರ ರಾತ್ರಿ ಜರುಗಿದೆ.ತುಮಕೂರು ನಗರದ ಗೋಕುಲ ಬಡಾವಣೆಯ 7ನೇ ಕ್ರಾಸ್ ನಿವಾಸಿ ನವೀನ್‌ಕುಮಾರ್ (25) ಹಾಗೂ ದೊಡ್ಡಿಹಳ್ಳಿಯ ಬಿ.ಕೆ.ವಿನಯ್ (22) ಮೃತಪಟ್ಟವರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ನವೀನ್‌ಕುಮಾರ್ ಸಾವಿನ ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ಆತನ ಮಾವ ನಾಗೇಂದ್ರ (44) ತೀವ್ರ ಹೃದಯಾಘಾತದಿಂದ ಅಸ್ವಸ್ಥಗೊಂಡನು. ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಮೃತ ನವೀನ್‌ಕುಮಾರ್ ಹಾಗೂ ವಿನಯ್ ಅವರು ತಮ್ಮ ಆರು ಮಂದಿ ಸ್ನೇಹಿತರೊಂದಿಗೆ ಮೂರು ಬೈಕ್‌ಗಳಲ್ಲಿ ತುಮಕೂರಿನಿಂದ ಚನ್ನಪಟ್ಟಣದ ಡಾಬಾವೊಂದಕ್ಕೆ ಮಾಂಸದೂಟ ಮಾಡಲು ಬರುತ್ತಿದ್ದರು. ಸಿದ್ದನಹಳ್ಳಿ ಬಳಿ ರಾತ್ರಿ 7 ಗಂಟೆ ಸಮಯದಲ್ಲಿ ಬೈಕ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಕೆಸ್ತೂರು ಪೊಲೀಸರು ಟ್ರ್ಯಾಕ್ಟರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.