ಸಾರಾಂಶ
ಬೆಂಗಳೂರು : ರಸ್ತೆ ದಾಟುವಾಗ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಾಜಿನಗರ ನಿವಾಸಿ ರಾಜನ್(94) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಬುಧವಾರ ಬೆಳಗ್ಗೆ ಸುಮಾರು 10.30ಕ್ಕೆ ವಾಟಾಳ್ ನಾಗರಾಜ್ ರಸ್ತೆಯ ಭಾಷ್ಯಂ ವೃತ್ತದ ಬಳಿ ಈ ಘಟನೆ ನಡೆದಿದೆ.
ನಿವೃತ್ತ ಪ್ರಾಧ್ಯಾಪಕ ರಾಜನ್ ರಾಜಾಜಿನಗರದಲ್ಲಿ ಕುಟುಂಬದ ಜತೆಗೆ ನೆಲೆಸಿದ್ದಾರೆ. ಬುಧವಾರ ಬೆಳಗ್ಗೆ ಬ್ಯಾಂಕ್‌ಗೆ ತೆರಳಿ ಬಳಿಕ ಮನೆಗೆ ವಾಪಾಸ್ ಆಗುವಾಗ ವಾಟಾಳ್ ನಾಗರಾಜ್ ರಸ್ತೆಯ ಭಾಷ್ಯಂ ವೃತ್ತದ ಬಳಿ ರಸ್ತೆ ದಾಟಲು ಮುಂದಾಗಿದ್ದಾರೆ. ಈ ವೇಳೆ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ ರಾಜನ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ರಾಜನ್ ಅವರ ತಲೆಗೆ ತೀವ್ರ ಪೆಟ್ಟುಬಿದ್ದು ರಕ್ತಸ್ರಾವವಾಗಿದೆ.ಆಸ್ಪತ್ರೆಗೆ ದಾಖಲಿಸಿದ ಹೆಡ್ ಕಾನ್‌ಸ್ಟೇಬಲ್
ಇದೇ ಸಮಯಕ್ಕೆ ಸಂಚಾರ ವಿಭಾಗದ ಹೆಡ್‌ಕಾನ್‌ಸ್ಟೇಬಲ್ ಮಲ್ಲಿಕಾರ್ಜುನ್ ಅವರು ಅದೇ ರಸ್ತೆಯಲ್ಲಿ ಬಂದಿದ್ದಾರೆ. ಅಪಘಾತದಿಂದ ಗಾಯಗೊಂಡು ಬಿದ್ದಿದ್ದ ರಾಜನ್ ಅವರನ್ನು ಸ್ಥಳೀಯರ ನೆರವಿನೊಂದಿಗೆ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಸದ್ಯಕ್ಕೆ ಗಾಯಾಳು ರಾಜನ್‌ಗೆ ಚಿಕಿತ್ಸೆ ಮುಂದುವರೆದಿದೆ.
ದ್ವಿಚಕ್ರ ವಾಹನ ಸವಾರ ರಾಜನ್‌ಗೆ ಡಿಕ್ಕಿ ಹೊಡೆದು ಪರಾರಿಯಾಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ಆಧರಿಸಿ ಸವಾರನ ಪತ್ತೆಗೆ ಶೋಧಿಸಲಾಗುತ್ತಿದೆ. ಈ ಸಂಬಂಧ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.