ಸಾರಾಂಶ
ಮಂಡ್ಯ : ರಸ್ತೆಯ ವಿಭಜಕದಲ್ಲಿರುವ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಸವಾರ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ನಗರದ ಮೈಷುಗರ್ ಪ್ರೌಢಶಾಲೆಯ ಮುಂಭಾಗ ಶನಿವಾರ ಬೆಳಿಗ್ಗೆ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಡಿನ್ನಪಲ್ಲಿ ಗ್ರಾಮದ ಮಾದೇಯನ್ ಅವರ ಪುತ್ರ ಎಂ.ಅರುಣ್ ಕುಮಾರ್ (27) ಮೃತ ಯುವಕನಾಗಿದ್ದು, ಈತನ ಸ್ನೇಹಿತ ತಮಿಳುನಾಡು ಕುಡ್ಲೂರು ಜಿಲ್ಲೆಯ ತೋಳಾರು ಗ್ರಾಮದ ಸೆಂದಿಲ್ ಕುಮಾರ್ ಅವರ ಪುತ್ರ ಜಯವೇಲು (27) ಗಾಯಗೊಂಡವರಾಗಿದ್ದಾರೆ.
ಅರುಣ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ತಮಿಳುನಾಡಿನ ಹೊಸೂರಿನಿಂದ ಊಟಿಗೆ ತನ್ನ ಸ್ನೇಹಿತ ಜಯವೇಲು ಜೊತೆ ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದರು. ಅಪಘಾತಕ್ಕೆ ಬೈಕ್‌ನ ಅತಿವೇಗವೇ ಕಾರಣ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದು, ಡಿಕ್ಕಿಯ ರಭಸಕ್ಕೆ ಬೇವಿನ ಮರವೇ ಮುರಿದು ಹೋಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಚಾರ ಠಾಣೆ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಚಾರ ನಿಯಮ ಪಾಲಿಸದ ಸವಾರರು:
ನಗರ ವ್ಯಾಪ್ತಿಯಲ್ಲಿ 30 ಕಿ.ಮೀ. ವೇಗದಲ್ಲಿ ಚಲಿಸಬೇಕೆಂದು ನಾಮಫಲಕಗಳನ್ನು ಹಾಕಿದ್ದರೂ ಬೈಕ್ ಹಾಗೂ ವಾಹನ ಚಾಲಕರು ಅತಿ ವೇಗವಾಗಿ ಚಲಿಸುತ್ತಿದ್ದಾರೆ. ಈ ಬಗ್ಗೆ ಸಂಚಾರ ಪೊಲೀಸರು ಅರಿವು ಮೂಡಿಸಿದರೂ ಬೈಕ್ ಸವಾರರು ಹಾಗೂ ವಾಹನ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸದಿರುವುದು ಅಪಘಾತಗಳಿಗೆ ಕಾರಣವಾಗಿದೆ ಎನ್ನುವುದು ಪೊಲೀಸರು ಹೇಳುವ ಮಾತಾಗಿದೆ.