ಸಾರಾಂಶ
ಡಿಕ್ಕಿ ಹೊಡೆದಾಗ ಬಿದ್ದ ಬೈಕ್ ಸವಾರನ ಮೇಲೆ ಬಿಎಂಟಿಸಿ ಬಸ್ ಹರಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ರಸ್ತೆಗೆ ಬಿದ್ದ ಸವಾರನ ಮೇಲೆ ಬಸ್‌ನ ಚಕ್ರಗಳು ಉರುಳಿ ಆತ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಜೆ.ಪಿ.ನಗರ ನಿವಾಸಿ ವೈಜನಾಥ್(31) ಮೃತ ಸವಾರ. ಶುಕ್ರವಾರ ಮಧ್ಯಾಹ್ನ 1.15ರ ಸುಮಾರಿಗೆ ಕೊತ್ತನೂರು ದಿಣ್ಣೆ ಮುಖ್ಯರಸ್ತೆಯಲ್ಲಿ ಬ್ರಿಗೇಡ್ ಮಿಲೇನಿಯಂ ಸಿಗ್ನಲ್ ಕಡೆಯಿಂದ ಬಿ.ಕೆ.ಸರ್ಕಲ್ ಕಡೆಗೆ ತೆರಳುವಾಗ ಮಾರ್ಗ ಮಧ್ಯೆ ಆಸ್ಪೀರ್ ಅಪಾರ್ಟ್‌ಮೆಂಟ್ ಬಳಿ ಈ ದುರ್ಘಟನೆ ನಡೆದಿದೆ.
ಕಲಬುರಗಿ ಮೂಲದ ವೈಜನಾಥ್, ನಗರದ ಜೆ.ಪಿ.ನಗರ ಆರನೇ ಹಂತದ ಖಾಸಗಿ ಬ್ಯಾಂಕ್‌ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದರು. ಬ್ಯಾಂಕ್ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ಕೊತ್ತನೂರು ದಿಣ್ಣೆ ಮುಖ್ಯರಸ್ತೆಯಲ್ಲಿ ತೆರಳುವಾಗ ಪಕ್ಕದಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್‌ನ ಚಾಲಕ ಬಲಕ್ಕೆ ಬಸ್ಸನ್ನು ತಿರುಗಿಸಿದಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಸವಾರ ವೈಜನಾಥ್ ಮೇಲೆ ಬಸ್‌ನ ಬಲಭಾಗದ ಹಿಂಬದಿ ಚಕ್ರ ಉರುಳಿದೆ. ಈ ವೇಳೆ ಎದೆ ಹಾಗೂ ತಲೆಗೆ ಗಂಭೀರ ಗಾಯಗಳಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಪಘಾತಕ್ಕೆ ಬಿಎಂಟಿಸಿ ಬಸ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.