ಸಾರಾಂಶ
ಬೆಂಗಳೂರು ; ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ದ್ವಿಚಕ್ರ ವಾಹನದಲ್ಲಿ ತಂದೆ-ಮಗಳು ಮನೆಗೆ ತೆರಳುವಾಗ ದ್ವಿಚಕ್ರ ವಾಹನಕ್ಕೆ ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿಯಾದ ಪರಿಣಾಮ ತಂದೆ ಮೃತಪಟ್ಟು, ಮಗಳು ಗಾಯಗೊಂಡಿರುವ ದಾರುಣ ಘಟನೆ ಹಲಸೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾಗಡಿ ರಸ್ತೆಯ 5ನೇ ಕ್ರಾಸ್ ನಿವಾಸಿ ನಾರಾಯಣ್ (37) ಮೃತ ದುರ್ದೈವಿ. ಇವರ ಪುತ್ರಿ ತ್ರಿಷಾಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಸುಮಾರು 2.15ಕ್ಕೆ ಟೌನ್‌ಹಾಲ್ ಜಂಕ್ಷನ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ ಚಾಲಕ ನವೀನ್ ಕುಮಾರ್ ಎಂಬಾತನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಬಸ್:
ಶಾಂತಿನಗರದಲ್ಲಿ ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿಕೊಂಡು ನಾರಾಯಣ್ ಮತ್ತು ತ್ರಿಷಾ ದ್ವಿಚಕ್ರ ವಾಹನದಲ್ಲಿ ಮಾಗಡಿ ರಸ್ತೆಯಲ್ಲಿರುವ ಮನೆ ಕಡೆಗೆ ಬರುತ್ತಿದ್ದರು. ಜೆ.ಸಿ.ರಸ್ತೆಯಲ್ಲಿ ಬಂದು ಟೌನ್ ಹಾಲ್ ಜಂಕ್ಷನ್ ಕಡೆಯಿಂದ ಸಿ.ಟಿ.ಮಾರ್ಕೆಟ್ ಕಡೆಗೆ ತೆರಳುವಾಗ ಹಿಂದಿನಿಂದ ವೇಗವಾಗಿ ಬಂದ ತಮಿಳುನಾಡು ಸಾರಿಗೆ ಸಂಸ್ಥೆ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ನಾರಾಯಣ್ ಬಲಭಾಗಕ್ಕೆ ಬಿದ್ದಿದ್ದಾರೆ. ಹಿಂಬದಿ ಕುಳಿತ್ತಿದ್ದ ತ್ರಿಷಾ ಎಡಭಾಗಕಕ್ಕೆ ಬಿದ್ದಿದ್ದಾಳೆ. ಈ ವೇಳೆ ಬಸ್‌ನ ಚಕ್ರ ನಾರಾಯಣ್ ಅವರ ಎದೆ ಮೇಲೆ ಉರುಳಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಗಾಯಾಳು ತಂದೆ-ಮಗಳನ್ನು ಸಮೀಪದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ನಾರಾಯಣ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಅಪಘಾತಕ್ಕೆ ತಮಿಳುನಾಡು ಸಾರಿಗೆ ಸಂಸ್ಥೆ ಬಸ್‌ನ ಚಾಲಕನ ವೇಗದ ಚಾಲನೆ ಹಾಗೂ ನಿರ್ಲಕ್ಷ್ಯವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬಸ್‌ನ ಚಾಲಕ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.