ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಲೆಕ್ಟ್ರಿಕ್ ಬೈಕ್ ಶೋ ರೂಮ್‌ವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಸಜೀವ ದಹನವಾಗಿರುವ ದಾರುಣ ಘಟನೆ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಓಕಳಿಪುರ ನಿವಾಸಿ ಪ್ರಿಯಾ(27) ಮೃತ ದುರ್ದೈವಿ. ರಾಜಾಜಿನಗರದ ಡಾ। ರಾಜ್‌ಕುಮಾರ್ ರಸ್ತೆಯ ‘ಮೈ ಇವಿ ಸ್ಟೋರ್’ ಹೆಸರಿನ ಎಲೆಕ್ಟ್ರಿಕ್ ಬೈಕ್ ಶೋ ರೂಮ್‌ನಲ್ಲಿ ಮಂಗಳವಾರ ಸಂಜೆ ಸುಮಾರು 5.30ಕ್ಕೆ ಈ ದುರ್ಘಟನೆ ನಡೆದಿದೆ. ಅಗ್ನಿ ಅವಘಡದಲ್ಲಿ ಸುಮಾರು 25ಕ್ಕೂ ಅಧಿಕ ಎಲೆಕ್ಟ್ರಿಕ್ ಬೈಕ್‌ಗಳು ಹಾಗೂ ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ. ಕಟ್ಟಡಕ್ಕೂ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಟ್ಟು ಕರಕಲಾದ ಯುವತಿ:ಸಂಜೆ ಎಲೆಕ್ಟ್ರಿಕ್ ಶೋ ರೂಮ್‌ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಶೋ ರೂಮ್‌ಗೆ ಬೆಂಕಿ ವ್ಯಾಪಿಸಿ ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ. ಈ ವೇಳೆ ಶೋ ರೂಮ್‌ನಲ್ಲಿದ್ದ 10ಕ್ಕೂ ಅಧಿಕ ಸಿಬ್ಬಂದಿ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಪ್ರಿಯಾ ಶೋ ರೂಮ್‌ನಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿದ್ದಾರೆ.
ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ:ವಿಷಯ ತಿಳಿದು ರಾಜಾಜಿನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಘಟನಾ ಸ್ಥಳದ ಸುತ್ತಮುತ್ತ ಜಮಾಯಿಸಿದ್ದ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಚದುರಿಸಿದರು. ಅಷ್ಟರಲ್ಲಿ ಎರಡು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಮುಂದಾದರು. ಆದರೆ, ಬೆಂಕಿಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದು ಅಗ್ನಿಶಾಮಕ ವಾಹನವನ್ನು ಸ್ಥಳಕ್ಕೆ ಕರೆಸಿಕೊಂಡು ಸುಮಾರು ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬಳಿಕ ಸುಟ್ಟು ಕರಕಲಾಗಿದ್ದ ಪ್ರಿಯಾ ಅವರ ಮೃತದೇಹವನ್ನು ಹೊರಗೆ ತಂದು ಆ್ಯಂಬುಲೆನ್ಸ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರು.
ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ?ಎಲೆಕ್ಟ್ರಿಕ್ ಬೈಕ್ ಶೋ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಶೋ ರೂಮ್‌ನಲ್ಲಿ ವಿದ್ಯುತ್ ಶಾರ್ಟ್‌ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಶೋ ರೂಮ್ ಒಳಗಿದ್ದ ಎಲೆಕ್ಟ್ರಿಕ್ ಬೈಕ್‌ನಲ್ಲಿ ವಿದ್ಯುತ್ ಶಾರ್ಟ್‌ಸರ್ಕಿಟ್ ಉಂಟಾಯಿತೋ ಅಥವಾ ಶೋ ರೂಮ್‌ನ ಬೇರೆ ಭಾಗದಲ್ಲಿ ಶಾರ್ಟ್‌ಸರ್ಕಿಟ್ ಉಂಟಾಯಿತೋ ಎಂಬುದು ಮುಂದಿನ ತನಿಖೆಯಿಂದ ತಿಳಿದು ಬರಬೇಕಿದೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಪ್ರಿಯಾ ಹುಟ್ಟುಹಬ್ಬ ಇತ್ತು: ತಂದೆಎಲೆಕ್ಟ್ರಿಕ್ ಬೈಕ್ ಶೋ ರೂಮ್ ಬೆಂಕಿ ಅವಘಡದಲ್ಲಿ ಪುತ್ರಿ ಪ್ರಿಯಾ ಮೃತಪಟ್ಟಿರುವ ವಿಷಯ ತಿಳಿದು ಶೋ ರೂಮ್ ಬಳಿಗೆ ದೌಡಾಯಿಸಿದ ತಂದೆ ಆರ್ಮುಗಂ ಆಕ್ರಂದನ ಮುಗಿಲು ಮುಟ್ಟಿತು. ಕಳೆದ ಮೂರು ವರ್ಷಗಳಿಂದ ಪುತ್ರಿ ಈ ಎಲೆಕ್ಟ್ರಿಕ್ ಶೋ ರೂಮ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ನ.20ರಂದು ಪುತ್ರಿಯ ಹುಟ್ಟುಹಬ್ಬವಿತ್ತು. ಹೊಸ ಬಟ್ಟೆ ಖರೀದಿಸಿದ್ದೆವು. ಈಗ ನನ್ನ ಮಗಳು ಮೃತಪಟ್ಟಿದ್ದಾಳೆ ಎಂದು ಆರ್ಮುಗಂ ಕಣ್ಣೀರಿಟ್ಟರು.
ರಸ್ತೆಯಲ್ಲಿ ಸಂಚಾರ ದಟ್ಟಣೆಎಲೆಕ್ಟ್ರಿಕ್ ಬೈಕ್ ಶೋರೂಮ್‌ನಲ್ಲಿ ಬೆಂಕಿ ಹೊತ್ತಿಕೊಂಡ ಬೆನ್ನಲ್ಲೇ ಡಾ। ರಾಜ್‌ಕುಮಾರ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಧಗಧಗನೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ರಸ್ತೆಯಲ್ಲೇ ವಾಹನ ನಿಲ್ಲಿಸಿಕೊಂಡು ಬೆಂಕಿ ನೋಡುತ್ತಾ ನಿಂತಿದ್ದರು. ಹೀಗಾಗಿ ಡಾ। ರಾಜ್ ಕುಮಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆ, ರಾಜಾಜಿನಗರ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿಯಿತು. ಅಷ್ಟರಲ್ಲಿ ಪೊಲೀಸರು ವಾಹನ ಸವಾರರನ್ನು ಮುಂದಕ್ಕೆ ಕಳುಹಿಸಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿದರು.
ಬೈಕ್‌ಗಳ ಬ್ಯಾಟರಿಗಳು ಸ್ಫೋಟಶೋ ರೂಮ್‌ನಲ್ಲಿ ಸುಮಾರು 25ಕ್ಕೂ ಅಧಿಕ ಎಲೆಕ್ಟ್ರಿಕ್ ಬೈಕ್‌ಗಳು ಇದ್ದವು. ಬೆಂಕಿ ಅವಘಡದಲ್ಲಿ ಎಲ್ಲಾ ಬೈಕ್‌ಗಳು ಸುಟ್ಟು ಕರಕಲಾಗಿವೆ. ಬೈಕ್‌ಗಳ ಬ್ಯಾಟರಿಗಳು ಸ್ಫೋಟಗೊಂಡ ಪರಿಣಾಮ ಶೋ ರೂಮ್‌ನಲ್ಲಿ ಬೆಂಕಿಯ ಪ್ರಮಾಣ ಹೆಚ್ಚಾಯಿತು. ಹೀಗಾಗಿ ಅಗ್ನಿಶಾಮಕ ಶಾಮಕ ಸಿಬ್ಬಂದಿ ಸುಮಾರು ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಎಲೆಕ್ಟ್ರಿಕ್ ಬೈಕ್ ಶೋ ರೂಮ್‌ನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದು ಅವಘಡಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. 25ಕ್ಕೂ ಅಧಿಕ ಬೈಕ್‌ಗಳು ಸುಟ್ಟು ಕರಕಲಾಗಿವೆ. ತನಿಖೆ ಬಳಿಕ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ.-ಯೂನಿಸ್, ಅಗ್ನಿಶಾಮಕ ದಳ ಉಪನಿರ್ದೇಶಕ.