ಬಿಕ್ಲು ಶಿವ ಹತ್ಯೆಯ ತನಿಖೆ ಚುರುಕು: ಪ್ರಮುಖ ಆರೋಪಿಗೆ ಪೊಲೀಸರ ಶೋಧ

| AFP | Published : Jul 18 2025, 01:45 AM IST / Updated: Jul 18 2025, 07:06 AM IST

KSRP
ಬಿಕ್ಲು ಶಿವ ಹತ್ಯೆಯ ತನಿಖೆ ಚುರುಕು: ಪ್ರಮುಖ ಆರೋಪಿಗೆ ಪೊಲೀಸರ ಶೋಧ
Share this Article
  • FB
  • TW
  • Linkdin
  • Email

ಸಾರಾಂಶ

ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಸಂಬಂಧ ಕೆ.ಆರ್‌. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ಬೆಂಬಲಿಗರು ಎನ್ನಲಾದ ಐವರನ್ನು ತೀವ್ರ ವಿಚಾರಣೆ ಬಳಿಕ ಭಾರತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :   ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಸಂಬಂಧ ಕೆ.ಆರ್‌. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ಬೆಂಬಲಿಗರು ಎನ್ನಲಾದ ಐವರನ್ನು ತೀವ್ರ ವಿಚಾರಣೆ ಬಳಿಕ ಭಾರತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಣ್ಣೂರಿನ ಕಿರಣ್, ವಿಮಲ್, ಸ್ಯಾಮ್ಯುವೆಲ್‌, ಪ್ರದೀಪ್‌, ಮದನ್‌ ಬಂಧಿತರಾಗಿದ್ದು, ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಹಲಸೂರು ಕೆರೆ ಸಮೀಪ ರೌಡಿ ಶಿವ ಹತ್ಯೆ ನಡೆದ ಕೆಲವೇ ತಾಸುಗಳಲ್ಲಿ ಮಂಗಳವಾರ ರಾತ್ರಿ ಈ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಸುದೀರ್ಘ ವಿಚಾರಣೆ ಬಳಿಕ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ ಪೊಲೀಸರು, ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಮತ್ತೆ ವಶಕ್ಕೆ ಪಡೆದಿದ್ದಾರೆ.

ಕೆ.ಆರ್‌. ಪುರ ಹತ್ತಿರದ ಕೆತ್ತಗನೂರಿನ ಜಮೀನು ವಿಚಾರವಾಗಿ ರೌಡಿ ‍ಶಿವ ಹಾಗೂ ಶಾಸಕ ಬೈರತಿ ಬಸವರಾಜು ಅವರ ಬೆಂಬಲಿಗ ಜಗದೀಶ್ ಮಧ್ಯೆ ವಿವಾದವಾಗಿತ್ತು. ಈ ಭೂ ಗಲಾಟೆ ಹಿನ್ನೆಲೆಯಲ್ಲಿ ಶಿವನ ಹತ್ಯೆಗೆ ಜಗದೀಶ ಸಂಚು ರೂಪಿಸಿದ್ದ. ಅಂತೆಯೇ ಹಲಸೂರು ಕೆರೆ ಸಮೀಪದ ತನ್ನ ಮನೆ ಮುಂದೆ ಮಂಗಳವಾರ ರಾತ್ರಿ ನಿಂತಿದ್ದ ಶಿವನ ಮೇಲೆ ಭೀಕರವಾಗಿ ದಾಳಿ ನಡೆಸಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು. ಈ ಹತ್ಯೆ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಬೈರತಿ ಬಸವರಾಜು ಅವರ ಹೆಸರು ಸಹ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ಈ ಹತ್ಯೆಗೂ ಮುನ್ನ ನಗರ ತೊರೆದು ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಜಗದೀಶ್, ಅಲ್ಲಿಂದಲೇ ತನ್ನ ಸಹಚರರಿಗೆ ಸೂಚನೆ ಕೊಟ್ಟು ಶಿವನ ಹತ್ಯೆ ಮಾಡಿಸಿದ್ದ. ಹೀಗಾಗಿ ಜಗ್ಗನ ಬೇಟೆಗೆ ಹೊರ ರಾಜ್ಯಕ್ಕೆ ಕೆ,ಜಿ.ಹಳ್ಳಿ ಉಪ ವಿಭಾಗದ ಪೊಲೀಸರ ತಂಡ ತೆರಳಿದೆ ಎಂದು ತಿಳಿದು ಬಂದಿದೆ.

ಜಮೀನು ವಿಚಾರವಾಗಿ ಮಿತ್ರರಲ್ಲಿ ಮನಸ್ತಾಪ:

ಹಲವು ವರ್ಷಗಳಿಂದ ರೌಡಿ ಬಿಕ್ಲು ಶಿವ ಹಾಗೂ ಹೆಣ್ಣೂರಿನ ಜಗದೀಶ್ ಆತ್ಮೀಯ ಸ್ನೇಹಿತರಾಗಿದ್ದರು. ಈ ಗೆಳೆತನದಲ್ಲೇ ಪರಸ್ಪರ ಆರ್ಥಿಕ ವ್ಯವಹಾರ ಸಹ ನಡೆಸಿದ್ದರು. ಆದರೆ ಕೆತ್ತಗನೂರು ಜಮೀನು ವಿಚಾರವಾಗಿ ಈ ಗೆಳೆಯರ ಮಧ್ಯೆ ಮನಸ್ತಾಪ ಮೂಡಿ ಅದೂ ಪರಸ್ಪರರು ಕತ್ತಿ ಮಸೆಯುವ ಮಟ್ಟಿಗೆ ಹೋಯಿತು. ಈ ಹಗೆತನದಲ್ಲೇ ಶಿವನ ಹತ್ಯೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಜೀವ ಭೀತಿಯಲ್ಲಿದ್ದ ಶಿವ:

ತನ್ನ ಶತ್ರುಗಳಿಂದ ಜೀವಭೀತಿಗೊಳಗಾಗಿದ್ದ ಬಿಕ್ಲು ಶಿವ, ತನ್ನ ಹಾಗೂ ಕುಟುಂಬ ರಕ್ಷಣೆಗೆ ಭಾರಿ ಮುಂಜಾಗ್ರತೆ ವಹಿಸಿದ್ದ. ಮನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ ಆತ, ಅಪರಿಚಿತರು ಯಾರೇ ಬಂದರೂ ಮನೆ ಬಾಗಿಲು ತೆರೆಯದಂತೆ ತಾಯಿ ಹಾಗೂ ಪತ್ನಿಗೆ ಸ್ಪಷ್ಟವಾಗಿ ಹೇಳಿದ್ದ. ಅಲ್ಲದೆ ತನಗೆ ಜೀವ ಬೆದರಿಕೆ ಇರುವುದಾಗಿ ಆರೋಪಿಸಿ ಭಾರತಿನಗರ ಠಾಣೆಗೆ ಶಾಸಕ ಬೈರತಿ ಬಸವರಾಜು ಅವರ ಬೆಂಬಲಿಗರ ವಿರುದ್ಧ ದೂರು ಸಹ ಕೊಟ್ಟಿದ್ದ ಎಂದು ಮೂಲಗಳು ಹೇಳಿವೆ.

ಈ ಪ್ರಾಣಭೀತಿ ಹಿನ್ನೆಲೆಯಲ್ಲಿ ಹಳೆ ಪ್ರಕರಣದಲ್ಲಿ ಜಾಮೀನು ನಿಯಮ ಉಲ್ಲಂಘಿಸಿ ತಾನಾಗಿಯೇ ಜೈಲು ಸೇರಿದ್ದ ಶಿವ, ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ ಎನ್ನಲಾಗಿದೆ.

Read more Articles on