ಅರಣ್ಯ ಪ್ರದೇಶದಲ್ಲಿ ಯಾವೆಲ್ಲ ಪ್ರಭೇದದ ಪಕ್ಷಿಗಳಿವೆ ಎಂಬುದನ್ನು ಅರಿಯಲು ರಾಜ್ಯದಲ್ಲೇ ಮೊದಲ ಬಾರಿಗೆ ಪಕ್ಷಿ ಗಣತಿ

| Published : Jan 23 2025, 12:47 AM IST / Updated: Jan 23 2025, 04:23 AM IST

nancy tiwari
ಅರಣ್ಯ ಪ್ರದೇಶದಲ್ಲಿ ಯಾವೆಲ್ಲ ಪ್ರಭೇದದ ಪಕ್ಷಿಗಳಿವೆ ಎಂಬುದನ್ನು ಅರಿಯಲು ರಾಜ್ಯದಲ್ಲೇ ಮೊದಲ ಬಾರಿಗೆ ಪಕ್ಷಿ ಗಣತಿ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಪ್ರದೇಶದಲ್ಲಿ ಯಾವೆಲ್ಲ ಪ್ರಭೇದದ ಪಕ್ಷಿಗಳಿವೆ ಎಂಬುದನ್ನು ಅರಿಯಲು ರಾಜ್ಯದಲ್ಲೇ ಮೊದಲ ಬಾರಿಗೆ ಪಕ್ಷಿಗಳ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಬರುವ ಫೆ.1 ಮತ್ತು 2ರಂದು ಮಲೆಮಹದೇಶ್ವರ ಬೆಟ್ಟ ವನ್ಯ ಜೀವಿಧಾಮದಲ್ಲಿ ಸಮೀಕ್ಷೆ ನಡೆಯಲಿದೆ.

ಗಿರೀಶ್‌ ಗರಗ

 ಬೆಂಗಳೂರು : ಅರಣ್ಯ ಪ್ರದೇಶದಲ್ಲಿ ಯಾವೆಲ್ಲ ಪ್ರಭೇದದ ಪಕ್ಷಿಗಳಿವೆ ಎಂಬುದನ್ನು ಅರಿಯಲು ರಾಜ್ಯದಲ್ಲೇ ಮೊದಲ ಬಾರಿಗೆ ಪಕ್ಷಿಗಳ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಬರುವ ಫೆ.1 ಮತ್ತು 2ರಂದು ಮಲೆಮಹದೇಶ್ವರ ಬೆಟ್ಟ ವನ್ಯ ಜೀವಿಧಾಮದಲ್ಲಿ ಸಮೀಕ್ಷೆ ನಡೆಯಲಿದೆ.

ರಾಜ್ಯದ ಅರಣ್ಯ ಪ್ರದೇಶದಲ್ಲಿನ ಹುಲಿ-ಆನೆಯಂತಹ ವನ್ಯಜೀವಿಗಳನ್ನು ಕಾಲಕಾಲಕ್ಕೆ ಗಣತಿ ಮಾಡಲಾಗುತ್ತದೆ. ಆದರೆ, ಇದೀಗ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದಲ್ಲಿ ಪಕ್ಷಿಗಳ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ, 906 ಚದರ ಕಿ.ಮೀ. ವಿಸ್ತೀರ್ಣದ ಅರಣ್ಯ ಪ್ರದೇಶ ಹೊಂದಿದೆ.

ಈ ಪ್ರದೇಶದಲ್ಲಿ ಫೆ.1 ಮತ್ತು 2ನೇ ತಾರೀಖಿನಂದು ಪಕ್ಷಿಗಳ ಸಮೀಕ್ಷೆಯನ್ನು ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವಿಭಾಗ ನಡೆಸಲಿದ್ದು, ಇದಕ್ಕಾಗಿ ಸಾರ್ವಜನಿಕರನ್ನೂ ಬಳಸಿಕೊಳ್ಳಲಾಗುತ್ತಿದೆ.

50 ತಂಡಗಳ ಮೂಲಕ ಸರ್ವೇ:

ಪಕ್ಷಿಗಳ ಸಮೀಕ್ಷೆಗಾಗಿ ಸಾರ್ವಜನಿಕರು, ವನ್ಯಜೀವಿ ಪ್ರಿಯರು, ಸ್ವಯಂ ಸೇವಕರನ್ನೂ ಬಳಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಈಗಾಗಲೇ ನೋಂದಣಿಯನ್ನೂ ಮಾಡಿಸಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ನಡೆಯುವ ಸಮೀಕ್ಷೆಗಾಗಿ 50 ತಂಡಗಳನ್ನು ರಚಿಸಲಾಗುತ್ತಿದೆ. ಪ್ರತಿ ತಂಡದಲ್ಲೂ ಸ್ವಯಂ ಸೇವಕರು, ಅರಣ್ಯ ಇಲಾಖೆ ಸಿಬ್ಬಂದಿ ಅಥವಾ ಅಧಿಕಾರಿ ಸೇರಿದಂತೆ ಒಟ್ಟು 5ರಿಂದ 6 ಜನರ ತಂಡ ರಚಿಸಿ ಸಮೀಕ್ಷೆ ಮಾಡಲಾಗುತ್ತದೆ. ಈ ತಂಡಗಳು ಎರಡೂ ದಿನವೂ ಬೆಳಗಿನ ಜಾವ 3ರಿಂದ 4 ಗಂಟೆಯವರೆಗೆ ಹಾಗೂ ಸಂಜೆ ವೇಳೆ ಕಾಡಿನಲ್ಲಿ ಸಂಚರಿಸಿ ಪಕ್ಷಿಗಳ ಇರುವಿಕೆಯನ್ನು ದಾಖಲಿಸಲಿವೆ.

ಹುಲಿ-ಆನೆ ಗಣತಿ ಮಾದರಿ:

ಪಕ್ಷಿಗಳ ಸಮೀಕ್ಷೆಯನ್ನು ಹುಲಿ ಮತ್ತು ಆನೆ ಗಣತಿಯಂತೆಯೇ ಮಾಡಲಾಗುತ್ತಿದೆ. ಪ್ರತಿ ತಂಡಕ್ಕೂ ನಿಗದಿತ ಸ್ಥಳವನ್ನು ನೀಡಿ, ಅಲ್ಲಿ ಬರುವ ಪಕ್ಷಿಗಳ ಪ್ರಭೇದವನ್ನು ದಾಖಲಿಸಲಾಗುತ್ತದೆ. ಹೀಗೆ ದಾಖಲಿಸುವಾಗ ಅವುಗಳು ಹಾರಾಡುವುದು, ಕುಳಿತಿರುವುದು ಸೇರಿದಂತೆ ಮತ್ತಿತರ ಭಾವಚಿತ್ರವನ್ನು ತೆಗೆಯಲಾಗುತ್ತದೆ. ಅದನ್ನು ಅರಣ್ಯ ಇಲಾಖೆಯಿಂದ ನೀಡಲಾಗುವ ಮಾದರಿ ಅರ್ಜಿಯಲ್ಲಿ ದಾಖಲಿಸಲಾಗುವುದು. ಎಲ್ಲ 50 ತಂಡಗಳಿಂದಲೂ ಪಡೆಯುವ ಸಮೀಕ್ಷಾ ವರದಿ ಆಧರಿಸಿ ಒಂದೆಡೆ ಸೇರಿಸಿ, ಅದನ್ನು ಅರಣ್ಯ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪಕ್ಷಿ ತಜ್ಞರು ಪರಿಶೀಲಿಸಲಿದ್ದಾರೆ. ಅದಾದ ನಂತರ ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ಅರಣ್ಯ ಪ್ರದೇಶದಲ್ಲಿ ಎಷ್ಟು ಪ್ರಭೇದದ ಪಕ್ಷಿಗಳಿವೆ ಎಂಬ ವರದಿಯನ್ನು ಸಿದ್ಧಪಡಿಸಲಾಗುತ್ತದೆ.

ಸುರಕ್ಷತೆಗೂ ಕ್ರಮ:

ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚಿನ ಆನೆಗಳು, 20ಕ್ಕೂ ಹೆಚ್ಚಿನ ಹುಲಿಗಳಿವೆ. ಅದರ ಜತೆಗೆ ಚಿರತೆ, ಕಾಡು ನಾಯಿ, ಕಾಡೆಮ್ಮೆ ಸೇರಿದಂತೆ ಹಲವು ಬಗೆಯ ವನ್ಯಜೀವಿಗಳಿವೆ. ಅವುಗಳಿಂದ ರಕ್ಷಣೆ ಪಡೆದು ಸಮೀಕ್ಷೆ ಮಾಡಲು ಮಲೆಮಹದೇಶ್ವರ ವನ್ಯಜೀವಿಧಾಮದ ವಿಭಾಗ ಪ್ರತಿ ಸಮೀಕ್ಷಾ ತಂಡಕ್ಕೂ ಸುರಕ್ಷಾ ಪರಿಕರಗಳನ್ನು ನೀಡಲಿದೆ.

ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿನ ಪಕ್ಷಿಗಳ ಪ್ರಭೇದವನ್ನು ಅರಿಯಲು ಸಮೀಕ್ಷೆ ನಡೆಸಲಾಗುತ್ತಿದೆ. ಎರಡು ದಿನ ಸಮೀಕ್ಷೆ ನಡೆಸಲಾಗುತ್ತಿದ್ದು, ಅದಕ್ಕಾಗಿ 50 ತಂಡ ರಚಿಸಲಾಗುವುದು. ಹಿಂದೆ ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಆ ಕುರಿತ ಮಾಹಿತಿ ಲಭ್ಯವಿಲ್ಲ.

-ಡಾ। ಸಂತೋಷ್‌ಕುಮಾರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ.

286 ಪ್ರಭೇದದ ಪಕ್ಷಿಗಳು?

ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ 2014ರಲ್ಲಿ ಈಗಾಗಲೇ ಪಕ್ಷಿಗಳ ಸಮೀಕ್ಷೆ ನಡೆಸಲಾಗಿದೆ ಎಂಬ ಮಾಹಿತಿಯಿದೆ. ಆ ಸಂದರ್ಭದಲ್ಲಿ 286 ಪ್ರಭೇದದ ಪಕ್ಷಿಗಳು ವನ್ಯಜೀವಿಧಾಮದಲ್ಲಿ ಪತ್ತೆ ಮಾಡಲಾಗಿತ್ತು. ಆದರೆ, ಆ ಕುರಿತ ಮಾಹಿತಿ ಸದ್ಯ ಅರಣ್ಯ ಇಲಾಖೆಯಲ್ಲಿ ಲಭ್ಯವಿಲ್ಲ. ಹೀಗಾಗಿ ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮದಲ್ಲಿ ಪಕ್ಷಿಗಳ ಸಮೀಕ್ಷೆ ನಡೆಸಲಾಗುತ್ತಿದೆ.