ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಕ್ರಮವಾಗಿ ಮೊಬೈಲ್ ಕರೆಗಳ ವಿವರ (ಸಿಡಿಆರ್) ಪಡೆದು ಸಾರ್ವಜನಿಕರಿಗೆ ₹18 ಸಾವಿರದಿಂದ ₹20 ಸಾವಿರವರೆಗೆ ಮಾರಾಟ ಮಾಡುತ್ತಿದ್ದ ಖಾಸಗಿ ಮೂರು ಪತ್ತೆದಾರಿ (ಡಿಟೆಕ್ಟಿವ್) ಏಜೆನ್ಸಿಗಳ ಮಾಲೀಕರು ಹಾಗೂ ಕೆಲಸಗಾರರನ್ನು ಸಿಸಿಬಿ ಬಂಧಿಸಿದೆ.ಕೆಂಗೇರಿ ಉಪ ನಗರದ ಡೈಮಂಡ್ ಸ್ಟ್ರೀಟ್ ನಿವಾಸಿ ಪುರುಷೋತ್ತಮ್, ಮಾರತ್ತಹಳ್ಳಿಯ ಜಿ.ಕೆ.ತಿಪ್ಪೇಸ್ವಾಮಿ, ಭಾರತ್ ನಗರದ ಮಹಾಂತಗೌಡ ಪಾಟೀಲ್, ವಿಜಯನಗರದ ರೇವಂತ, ದಾಸನಪುರದ ಅಡಕಮಾರನಹಳ್ಳಿಯ ಗುರುಪಾದಸ್ವಾಮಿ, ಕೊತ್ತನೂರಿನ ರಾಜಶೇಖರ್, ಸತೀಶಕುಮಾರ್, ಜೆ.ಸಿ.ನಗರ ಕುರುಬರಹಳ್ಳಿಯ ವಿ.ಶ್ರೀನಿವಾಸ್, ಭರತ್ ಹಾಗೂ ಮಹಾರಾಷ್ಟ್ರದ ಪುಣೆ ಮೂಲದ ಪ್ರಸನ್ನ ದತ್ತಾತ್ರೇಯ ಗರುಡಾ ಬಂಧಿತರಾಗಿದ್ದಾರೆ. ಆರೋಪಿಗಳಿಂದ 43 ಮೊಬೈಲ್ ಸಂಖ್ಯೆಗಳ ಸಿಡಿಆರ್ ವಿವರ ಹಾಗೂ ಕೆಲ ಡಿಜಿಟಲ್ ವಸ್ತುಗಳನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಕ್ರಮ ಸಿಡಿಆರ್ ದಂಧೆ ಮಾಹಿತಿ ಹಿನ್ನೆಲೆಯಲ್ಲಿ ಗೋವಿಂದರಾಜನಗರದ ‘ರಾಜಧಾನಿ’, ‘ಮಹಾನಗರಿ’ ಹಾಗೂ ‘ಎಲೆಗೆಂಟ್’ ಹೆಸರಿನ ಡಿಟೆಕ್ಟಿವ್ ಏಜೆನ್ಸಿಗಳ ಮೇಲೆ ಸಿಸಿಬಿ ಪ್ರತ್ಯೇಕವಾಗಿ ದಾಳಿ ನಡೆಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಸಿಡಿಆರ್ ದಂಧೆ ಹೇಗೆ?:
ಪ್ರಶಾಂತನಗರದಲ್ಲಿ ಮಹಾನಗರಿ ಡಿಟೆಕ್ಟಿವ್ ಆ್ಯಂಡ್ ಸೆಕ್ಯೂರಿಟಿ ಸರ್ವೀಸ್ ಅನ್ನು ಸತೀಶ್ ನಡೆಸುತ್ತಿದ್ದರೆ, ಗೋವಿಂದರಾಜನಗರದ 4ನೇ ಮುಖ್ಯರಸ್ತೆಯಲ್ಲಿ ರಾಜಧಾನಿ ಕಾರ್ಪೋರೇಷನ್ ಹೆಸರಿನ ಡಿಟೆಕ್ಟಿವ್ ಏಜೆನ್ಸಿಯನ್ನು ಪುರುಷೋತ್ತಮ್ ಹೊಂದಿದ್ದ. ಬಸವೇಶ್ವರನಗರದ 3ನೇ ಹಂತದ ಎಲ್‌ಐಸಿ ಕಾಲೋನಿಯಲ್ಲಿ ಎಲಿಗೆಂಟ್ ಡಿಟೆಕ್ಟೀವ್ ಏಜೆನ್ಸಿಯನ್ನು ಶ್ರೀನಿವಾಸ್ ನಡೆಸುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.ಈ ಸಿಡಿಆರ್ ದಂಧೆಯಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಪ್ರಸನ್ನ ಪ್ರಮುಖ ಪಾತ್ರವಹಿಸಿದ್ದು, ಆತನ ಮೂಲಕ ಡಿಟೆಕ್ಟಿವ್ ಏಜೆನ್ಸಿಗಳ ಮಾಲೀಕರು ಸಿಡಿಆರ್ ಪಡೆಯುತ್ತಿದ್ದರು. ಅಲ್ಲದೆ ಈ ಕೃತ್ಯದಲ್ಲಿ ಸ್ಥಳೀಯರು ಸಾಥ್ ಕೊಟ್ಟಿದ್ದಾರೆ. ಹೀಗೆ ಸಂಗ್ರಹಿಸಿದ ಸಿಡಿಆರ್‌ಗಳನ್ನು ತಮ್ಮ ಏಜೆನ್ಸಿ ಕೆಲಸಗಾರರ ಮೂಲಕ 18- 20 ಸಾವಿರ ರು.ಗೆ ಮಾಲೀಕರು ಮಾರುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗ್ರಾಹಕರ ಸೋಗಿನಲ್ಲಿ ಸಿಸಿಬಿ ದಾಳಿ
ಸಿಡಿಆರ್ ದಂಧೆ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ತಮಗೆ ಸಿಡಿಆರ್ ಬೇಕು ಎಂದು ಆರೋಪಿತ ಡಿಟೆಕ್ಟಿವ್ ಏಜೆನ್ಸಿಗಳನ್ನು ಗ್ರಾಹಕರ ಸೋಗಿನಲ್ಲಿ ಸಂಪರ್ಕಿಸಿದ್ದಾರೆ. ಆಗ ಹಣದ ಡೀಲ್ ನಡೆದು ಸಿಡಿಆರ್ ನೀಡಲು ಸತೀಶ್, ಶ್ರೀನಿವಾಸ್ ಹಾಗೂ ಪುರುಷೋತ್ತಮ್ ತಂಡ ಒಪ್ಪಿದೆ. ಪೂರ್ವ ಒಪ್ಪಂದಂತೆ ಪುಣೆಯ ಪ್ರಸನ್ನ ಮೂಲಕ ಸಿಸಿಡಿ ತಂಡಕ್ಕೆ ಸಿಡಿಆರ್ ಅನ್ನು ಏಜೆನ್ಸಿಗಳು ನೀಡಿದ್ದವು. ಆಗ ಆ ಏಜೆನ್ಸಿಗಳ ಮೇಲೆ ದಾಳಿ ನಡೆಸಿ ಮಾಲೀಕರು ಹಾಗೂ ಅವರ ಕೆಲಸಗಾರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮೂರು ರಾಜ್ಯದಲ್ಲಿ ಜಾಲ: ಪೊಲೀಸರ ಮೇಲೂ ಶಂಕೆಸಿಡಿಆರ್ ದಂಧೆ ಜಾಲ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಹರಡಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾನೂನುಬಾಹಿರವಾಗಿ ಸಿಡಿಆರ್ ಸಂಗ್ರಹದಲ್ಲಿ ಕೆಲ ಪೊಲೀಸರು ಪಾತ್ರವಹಿಸಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ದಂಧೆಗೆ ಪೊಲೀಸರ ನೆರವಿಲ್ಲದೆ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ.ಮಹಿಳೆಯರ ಶೋಷಣೆ
ಮೊದಲು ರಾಜಧಾನಿ ಕಾರ್ಪೋರೇಷನ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್, ಜನವರಿಯಲ್ಲಿ ಆ ಏಜೆನ್ಸಿಯಲ್ಲಿ ಕೆಲಸ ತೊರೆದು ಮಹಾನಗರಿ ಹೆಸರಿನಲ್ಲಿ ತಾನೇ ಹೊಸದಾಗಿ ಡಿಟೆಕ್ಟಿವ್ ಏಜೆನ್ಸಿ ಆರಂಭಿಸಿದ್ದ. ಇನ್ನು ಸುಬ್ರಹ್ಮಣ್ಯನಗರ, ಬಾಗಲಗುಂಟೆ ಹಾಗೂ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗಳಲ್ಲಿ ಆತನ ಮೇಲೆ ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದಡಿ ಮೇರೆಗೆ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಯಾರೆಲ್ಲ ಸಿಡಿಆರ್‌ಗಳು?ಕೆಲ ಪತ್ನಿಯರ ಮೇಲೆ ಶಂಕೆ ವ್ಯಕ್ತಪಡಿಸಿ ಪತಿಯರು, ಕೌಟುಂಬಿಕ ಕಲಹಗಳ ಪ್ರಕರಣಗಳ ಆರೋಪಿಗಳು, ವ್ಯವಹಾರಿಕ ಪಾಲುದಾರರು ಹಾಗೂ ರೌಡಿಗಳು ಸಹ ಸಿಡಿಆರ್ ಪಡೆದಿರುವ ಬಗ್ಗೆ ಶಂಕೆ ಇದೆ. ಈಗ ಡಿಟೆಕ್ಟಿವ್ ಏಜೆನ್ಸಿಗಳ ಬಳಿ 43 ಮೊಬೈಲ್ ಸಂಖ್ಯೆಗಳ ಮಾಹಿತಿ ಸಿಕ್ಕಿದ್ದು, ಇವುಗಳ ಪೂರ್ವಾಪರ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಪೊಲೀಸರಿಗೆ ಮಾತ್ರ ಅಧಿಕಾರ
ಅಪರಾಧ ಪ್ರಕರಣಗಳ ಆರೋಪಿಗಳಿಗೆ ಸಂಬಂಧಿಸಿದ ಮೊಬೈಲ್ ಕರೆಗಳ ವಿವರ (ಸಿಡಿಆರ್) ಪಡೆಯಲು ಕಾನೂನು ಪ್ರಕಾರ ತನಿಖಾಧಿಕಾರಿಗಳಿಗೆ ಅಧಿಕಾರವಿದೆ. ಈ ಸಿಡಿಆರ್ ಪಡೆಯಲು ನಗರಗಳಲ್ಲಿ ಡಿಸಿಪಿ ಹಾಗೂ ಜಿಲ್ಲೆಗಳಲ್ಲಿ ಎಸ್ಪಿ ಅವರ ಅನುಮತಿ ಪಡೆಯಬೇಕು. ಅಲ್ಲದೆ ಸಿಡಿಆರ್ ಸಂಗ್ರಹಿಸುವ ಮುನ್ನ ಆ ಅಪರಾಧ ಕೃತ್ಯದಲ್ಲಿ ಆರೋಪಿತನ ಪಾತ್ರದ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಬೇಕು. ಈ ಕಾನೂನು ಪ್ರಕ್ರಿಯೆ ಬಳಿಕ ಸಿಡಿಆರ್ ತನಿಖಾಧಿಕಾರಿಗೆ ಸಿಗುತ್ತದೆ.