ಮದ್ದೂರು : ಕಾರು - ಆಟೋ ನಡುವೆ ಡಿಕ್ಕಿ: ಓರ್ವ ವ್ಯಕ್ತಿ ಸಾವು; 14 ಮಂದಿಗೆ ಗಾಯ

| Published : Nov 25 2024, 01:03 AM IST / Updated: Nov 25 2024, 04:25 AM IST

ಸಾರಾಂಶ

ಕಾರು ಮತ್ತು ಆಟೋ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಎಕ್ಸ್ ಪ್ರೆಸ್ ವೇನ ಸರ್ವಿಸ್ ರಸ್ತೆಯಲ್ಲಿ ಭಾನುವಾರ ಜರುಗಿದೆ.

  ಮದ್ದೂರು : ಕಾರು ಮತ್ತು ಆಟೋ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಎಕ್ಸ್ ಪ್ರೆಸ್ ವೇನ ಸರ್ವಿಸ್ ರಸ್ತೆಯಲ್ಲಿ ಭಾನುವಾರ ಜರುಗಿದೆ.

ಆಟೋದಲ್ಲಿದ್ದ ಅಪರಿಚಿತ ವ್ಯಕ್ತಿ ಮಂಡ್ಯದ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದು, ಶ್ವೇತಾ ಎಂಬ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದೆ. ಆಟೋದಲ್ಲಿದ್ದ ಭಾಗ್ಯಮ್ಮ ಜವರಮ್ಮ, ರಾಮು, ಶ್ರೀನಿಧಿ, ಸುಮತಿ, ಸಾವಿತ್ರಿ, ಸುಷ್ಮಾ, ಪ್ರೀತಮ್ , ಜೀವಿತ ಗಾಯಗೊಂಡಿದ್ದು, ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.ಕಾರಿನಲ್ಲಿದ್ದ ಸೌಭಾಗ್ಯ, ಪುಟ್ಟಸ್ವಾಮಿ, ಹೇಮಲತಾ, ಜೋಯಲ್ ಮದ್ದೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಪೈಕಿ ಕೆಲವರು ಗಾರ್ಮೇಂಟ್ಸ್ ನೌಕರರು, ಮತ್ತೆ ಕೆಲವರು ದೇವಸ್ಥಾನಕ್ಕೆ ಹೋಗಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಇವರಲ್ಲಿ ತಾಲೂಕಿನ ಸಾದೊಳಲು ಸೇರಿದಂತೆ ಮತ್ತಿತರ ಗ್ರಾಮದವರು ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.

ಐಶ್ವರ್ಯ ಕಾನ್ವೆಂಟ್ ಎದುರಿನ ಬೆಂಗಳೂರು- ಮೈಸೂರು ಹೆದ್ದಾರಿಯ ಡಾಲ್ಪಿನ್ ಬೇಕರಿಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಟೋಗೆ ಕಾರು ಡಿಕ್ಕಿಯಾಗಿದೆ. ಅಪಘಾತದ ನಂತರ ಆಟೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಸುದ್ದಿ ತಿಳಿದು ಸಂಚಾರಿ ಠಾಣೆ ಸಬ್ ಇನ್ಸ್ ಪೆಕ್ಟರ್ ರಾಮಸ್ವಾಮಿ, ಕಮಲಾಕ್ಷಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಮಂಡ್ಯ ಮತ್ತು ಮದ್ದೂರು ಆಸ್ಪತ್ರೆಗೆ ಸಾಗಿಸಲು ನೆರವಾದರು.

ವೃತ್ತ ನಿರೀಕ್ಷಕ ಶಿವಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ಸಂಬಂಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ಮಂಡ್ಯ: ಅಪರಿಚಿತ ವ್ಯಕ್ತಿ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ತಾಲೂಕಿನ ಹನಕೆರೆ-ಮಂಡ್ಯ ರೈಲು ನಿಲ್ದಾಣಗಳ ನಡುವೆ ನಡೆದಿದೆ. ಮೃತನಿಗೆ ಸುಮಾರು 40 ವರ್ಷವಾಗಿದೆ. ಮುಖ ಜಜ್ಜಿದ್ದು 5.6 ಅಡಿ ಎತ್ತರ, ದೃಢಕಾಯ ಶರೀರ, ಗೋಧಿ ಬಣ್ಣ, ಕಪ್ಪು, ಬಿಳಿ ಮಿಶ್ರಿತ ಮೀಸೆ, ಕುರುಚಲು ಗಡ್ಡ ಬಿಟ್ಟಿದ್ದು, ತಿಳಿ ನೀಲಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಒಳ ಉಡುಪು, ಕಪ್ಪು ಬಣ್ಣದ ಚುಕ್ಕೆ ಇರುವ ಲುಂಗಿ, ಬಲಗೈಯಲ್ಲಿ ಕಪ್ಪು ದಾರ, ಒಂದು ಜೊತೆ ಹವಾಯಿ ಚಪ್ಪಲಿ ಧರಿಸಿದ್ದಾನೆ.

ಶವವನ್ನು ಮಿಮ್ಸ್ ಶವಾಗಾರಕ್ಕೆ ಸಾಗಿಸಲಾಗಿದೆ, ವಾರಸುದಾರರಿದ್ದಲ್ಲಿ ರೈಲ್ವೆ ಪೊಲೀಸರನ್ನು (ದೂ-0821-2516579, 9480802122 ಸಂಪರ್ಕಿಸಬಹುದು.