ಬೈಕ್‌ಗೆ ಕಾರು ಡಿಕ್ಕಿ: ಗಾಯಗೊಂಡಿದ್ದ ವ್ಯಕ್ತಿ ಸಾವು; ಅಂಗಾಂಗ ದಾನ

| Published : Jun 06 2024, 12:32 AM IST

ಬೈಕ್‌ಗೆ ಕಾರು ಡಿಕ್ಕಿ: ಗಾಯಗೊಂಡಿದ್ದ ವ್ಯಕ್ತಿ ಸಾವು; ಅಂಗಾಂಗ ದಾನ
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಗಾಯಗೊಂಡಿದ್ದ ಮಂಜು ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಸಿ.ಮಂಜು ಕೊನೆಯುಸಿರೆಳೆದಿದ್ದಾರೆ. ಮೃತ ಸಿ.ಮಂಜು ಅವರ ಅಂಗಾಂಗವನ್ನು ಕುಟುಂಬದವರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಮೃತರಿಗೆ ಓರ್ವ ಪುತ್ರ ಇದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾರು ಬೈಕ್‌ಗೆ ಡಿಕ್ಕಿಯಾಗಿ ಪತ್ನಿ ಮೃತಪಟ್ಟು, ಗಾಯಗೊಂಡಿದ್ದ ಪತಿಯೂ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆರಗೋಡು-ಮರಿಲಿಂಗನದೊಡ್ಡಿ ಗ್ರಾಮಗಳ ಬಳಿ ನಡೆದಿದೆ.

ಮದ್ದೂರು ತಾಲೂಕು ಕೊಪ್ಪದ ಷುಗರ್ ಪ್ಯಾಕ್ಟರಿಯ ಫೀಲ್ಡ್ ಮ್ಯಾನ್ ಆಗಿರುವ, ತಾಲೂಕಿನ ಚಿಕ್ಕಬಾಣಸವಾಡಿ ಗ್ರಾಮದ ಸಿ.ಮಂಜು (46), ಈತನ ಪತ್ನಿ ಎಚ್.ಎಸ್.ಸುನೀಲಾ (40) ಮೃತ ದಂಪತಿ.

ಕಳೆದ ಜೂ.3ರ ಸೋಮವಾರ ಮಧ್ಯಾಹ್ನ 1 ಗಂಟೆಯಲ್ಲಿ ಕೆರಗೋಡಿನ ದೇವಾಲಯಕ್ಕೆ ತಮ್ಮ ಹೀರೋ ಹೊಂಡಾ ಬೈಕ್ ನಲ್ಲಿ ದಂಪತಿ ತೆರಳುತ್ತಿದ್ದ ವೇಳೆ ಮರಿಲಿಂಗನದೊಡ್ಡಿ ಬಳಿ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಮಂಜು ಪತ್ನಿ ಸುನೀಲ ಸ್ಥಳದಲ್ಲೇ ಮೃತಪಟ್ಟಿದ್ದರು.

ತೀವ್ರ ಗಾಯಗೊಂಡಿದ್ದ ಮಂಜು ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಸಿ.ಮಂಜು ಕೊನೆಯುಸಿರೆಳೆದಿದ್ದಾರೆ. ಮೃತ ಸಿ.ಮಂಜು ಅವರ ಅಂಗಾಂಗವನ್ನು ಕುಟುಂಬದವರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಮೃತರಿಗೆ ಓರ್ವ ಪುತ್ರ ಇದ್ದಾರೆ.

ಮೃತರ ಅಂತ್ಯಕ್ರಿಯೆ ಗುರುವಾರ ಚಿಕ್ಕಬಾಣಸವಾಡಿಯಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಸಂಬಂಧ ಕೆರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾರು ಡಿಕ್ಕಿ: ಇಬ್ಬರು ಮಹಿಳೆಯರಿಗೆ ಗಾಯಮಳವಳ್ಳಿ:ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಂತಿದ್ದ ಮಹಿಳೆಯರಿಗೆ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಮದ್ದೂರು- ಮಳವಳ್ಳಿ ರಸ್ತೆಯ ನೆಲಮಾಕನಹಳ್ಳಿ ಗೇಟ್ ಬಳಿ ಮಂಗಳವಾರ ಸಂಜೆ ನಡೆದಿದೆ.

ನೆಲಮಾಕನಹಳ್ಳಿ ಗ್ರಾಮದ ಗೀತಾ ಮತ್ತು ರಶ್ಮಿ ಗಾಯಗೊಂಡವರು. ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದ ಮಹಿಳೆಯರು ಕೆಲಸ ಮುಗಿಸಿ ಬಸ್‌ನಲ್ಲಿ ವಾಪಸ್ ಬಂದು ನೆಲಮಾಕನಹಳ್ಳಿ ಗೇಟ್‌ನಲ್ಲಿ ಇಳಿದು ರಸ್ತೆ ದಾಟಲು ನಿಂತಿದ್ದರು.ಈ ವೇಳೆ ವೇಗವಾಗಿ ಮಳವಳ್ಳಿ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದು ರಸ್ತೆ ಬದಿಗೆ ಉರುಳಿ ಬಿದ್ದಿದೆ ಎನ್ನಲಾಗಿದೆ.

ಗಾಯಗೊಂಡಿದ್ದ ಮಹಿಳೆಯರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.