ಪ್ರಶ್ನೆಗಾಗಿ ಲಂಚ ಕೇಸ್‌: ಮಹುವಾಗೆ ಸಿಬಿಐ ತನಿಖೆ ಬಿಸಿ

| Published : Nov 26 2023, 01:15 AM IST

ಸಾರಾಂಶ

ನವದೆಹಲಿ: ಸಂಸತ್ತಿನಲ್ಲಿ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆ ಕೇಳುವುದಕ್ಕಾಗಿ ಲಂಚ ಪಡೆದುಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾಗೆ ಸಿಬಿಐ ತನಿಖೆ ಬಿಸಿ ಆರಂಭವಾಗಿದೆ. ಅವರ ವಿರುದ್ಧ ಸಿಬಿಐ ಶನಿವಾರ ಪ್ರಾಥಮಿಕ ತನಿಖೆ (ಪಿ.ಇ.) ಆರಂಭಿಸಿದೆ.

ಸಿಬಿಐನಿಂದ ಈಗ ಪ್ರಾಥಮಿಕ ತನಿಖೆ ಶುರು

ಪ್ರಕರಣದಲ್ಲಿ ಸತ್ವ ಇದ್ದರೆ ಮುಂದೆ ಎಫ್ಐಆರ್‌

ನವದೆಹಲಿ: ಸಂಸತ್ತಿನಲ್ಲಿ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆ ಕೇಳುವುದಕ್ಕಾಗಿ ಲಂಚ ಪಡೆದುಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾಗೆ ಸಿಬಿಐ ತನಿಖೆ ಬಿಸಿ ಆರಂಭವಾಗಿದೆ. ಅವರ ವಿರುದ್ಧ ಸಿಬಿಐ ಶನಿವಾರ ಪ್ರಾಥಮಿಕ ತನಿಖೆ (ಪಿ.ಇ.) ಆರಂಭಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸಿಬಿಐಗೆ, ಲೋಕಪಾಲ್‌ ಸಂಸ್ಥೆ ಇತ್ತೀಚೆಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ. ಪ್ರಕರಣದಲ್ಲಿ ಸತ್ವ ಇದೆ ಎಂದು ಈ ಹಂತದಲ್ಲಿ ಕಂಡುಬಂದರೆ ಮುಂದೆ ಎಫ್ಐಆರ್‌ ದಾಖಲಿಸಿ ಅಧಿಕೃತ ತನಿಖೆ ಆರಂಭಿಸಲಿದೆ.

ಮಹುವಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕೆ ಇಲ್ಲವೇ ಎಂಬುದು ಪ್ರಾಥಮಿಕ ತನಿಖೆಯನ್ನು ಆಧರಿಸಿ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಾಥಮಿಕ ತನಿಖೆಯ ವೇಳೆಯಲ್ಲಿ ಸಿಬಿಐ ಯಾವುದೇ ದಾಳಿ ಅಥವಾ ಬಂಧನ ನಡೆಸುವುದಿಲ್ಲ. ಇದರ ಬದಲಿಗೆ ಮಾಹಿತಿ ಸಂಗ್ರಹಣೆ, ಪರಿಶೀಲನೆಯನ್ನಷ್ಟೇ ನಡೆಸಲಿದೆ. ಆರೋಪ ಬಲವಾಗಿದೆ ಎಂದು ಕಂಡುಬಂದರೆ ಎಫ್‌ಐಆರ್ ದಾಖಲಿಸಿ ಸಂಪೂರ್ಣ ತನಿಖೆ ನಡೆಸಲಿದೆ. ಜತೆಗೆ ಸಂಸದೆಯನ್ನು ಪ್ರಶ್ನಿಸಲಿದ್ದು, ಬಳಿಕ ವರದಿಯನ್ನು ಲೋಕಪಾಲ್‌ಗೆ ಸಲ್ಲಿಸಲಿದೆ.ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಹಾಗೂ ಸುಪ್ರೀಂಕೋರ್ಟ್‌ ವಕೀಲ ಜೈ ಅನಂತ್ ದೇಹದ್ರಾಯ್‌ ಮೊದಲು ಈ ಪ್ರಕಣ ಬಯಲಿಗೆಳೆದವರು. ‘ಮೋದಿ ಸರ್ಕಾರ ಹಾಗೂ ಉದ್ಯಮಿ ಗೌತಮ್‌ ಅದಾನಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ತಲೆಬುಡವಿಲ್ಲದ ಪ್ರಶ್ನೆಗಳನ್ನು ಲೋಕಸಭೆಯಲ್ಲಿ ಕೇಳಲು ಮಹುವಾ ಅವರು ಉದ್ಯಮಿ ದರ್ಶನ್‌ ಹೀರಾನಂದಾನಿ ಅವರಿಂದ ಲಂಚ ಪಡೆದುಕೊಂಡಿದ್ದಾರೆ ಎಂದು ದೂರಿದ್ದರು. ಈ ಬಗ್ಗೆ ಲೋಕಸಭಾ ಸಮಿತಿ ಈಗಾಗಲೇ ಪ್ರತ್ಯೇಕ ತನಿಖೆ ನಡೆಸುತ್ತಿದೆ.

ಆದರೆ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿರುವ ಸಂಸದೆ ಮಹುವಾ, ಸಂಸತ್ತಿನಲ್ಲಿ ಅದಾನಿ ಹಾಗೂ ಪ್ರಧಾನಿ ಮೋದಿ ಅವರ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಕಾರಣಕ್ಕೆ ಈ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು.