ಸಾರಾಂಶ
ನಗರದಲ್ಲಿ ಸರಗಳ್ಳತನ ಕೃತ್ಯದಲ್ಲಿ ತೊಡಗಿದ್ದ ಇಬ್ಬರು ವೃತ್ತಿಪರ ಖದೀಮರನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಸರಗಳ್ಳತನ ಕೃತ್ಯದಲ್ಲಿ ತೊಡಗಿದ್ದ ಇಬ್ಬರು ವೃತ್ತಿಪರ ಖದೀಮರನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಲಗ್ಗೆರೆ ನಿವಾಸಿಗಳಾದ ಶಶಿಧರ್ ಹಾಗೂ ಅಭಿಲಾಷ್ ಬಂಧಿತರಾಗಿದ್ದು, ಆರೋಪಿಗಳಿಂದ ₹22.5 ಲಕ್ಷ ಮೌಲ್ಯದ 365 ಗ್ರಾಂ ಚಿನ್ನ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ದೊಡ್ಡಗೌಡನಪಾಳ್ಯದ ಸಮೀಪ ಮಹಿಳೆಯೊಬ್ಬರಿಂದ ದುಷ್ಕರ್ಮಿಗಳು ಸರ ಕಸಿದು ಪರಾರಿಯಾಗಿದ್ದರು. ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಗ್ಗೆರೆಯ ಶಶಿಧರ್ ಹಾಗೂ ಅಭಿಲಾಷ್ ವೃತ್ತಿಪರ ಸರಗಳ್ಳರಾಗಿದ್ದು, ಈ ಇಬ್ಬರ ವಿರುದ್ಧ ತುಮಕೂರು ಹಾಗೂ ಬೆಂಗಳೂರ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಎರಡು ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಆರೋಪಿಗಳು ಮತ್ತೆ ಚಾಳಿ ಮುಂದುವರೆಸಿದ್ದರು. ಜನ ಸಂಚಾರ ವಿರಳ ರಸ್ತೆಗಳಲ್ಲಿ ಅಡ್ಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಅಭಿಲಾಷ್ ಬೈಕ್ ಚಲಾಯಿಸಿದರೆ ಶಶಿಧರ್ ಸರ ಅಪಹರಿಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.