ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಗುತ್ತಿಗೆದಾರರೊಬ್ಬರಿಂದ ₹20 ಲಕ್ಷ ಪಡೆದು ಕಿಡಿಗೇಡಿಗಳು ವಂಚಿಸಿರುವ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರ್ತೂರಿನ ಗುತ್ತಿಗೆದಾರ ಮನುಕುಮಾರ್ ಮೋಸ ಹೋಗಿದ್ದು, ವಂಚನೆ ಕೃತ್ಯ ಬೆಳಕಿಗೆ ಬಂದ ಪರಾರಿಯಾಗಿರುವ ಹಣಕಾಸು ಇಲಾಖೆ ನೌಕರ ಎನ್ನಲಾದ ಎಂ.ಸಿ.ಗಿರೀಶ್‌ ಹಾಗೂ ಆತನ ಸಹಚರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕೆಲ ತಿಂಗಳ ಹಿಂದೆ ತನ್ನ ಪರಿಚಿತರ ಮೂಲಕ ಗುತ್ತಿಗೆದಾರ ಮನುಗೆ ಗಿರೀಶ್ ಸಂಪರ್ಕ ಬೆಳೆದಿದೆ. ಆಗ ತನ್ನನ್ನು ವಿತ್ತ ಇಲಾಖೆಯ ಉದ್ಯೋಗಿ ಎಂದು ಹೇಳಿಕೊಂಡ ಆತ, ತನಗೆ ಸರ್ಕಾರದ ಮಟ್ಟದಲ್ಲೇ ಒಳ್ಳೆಯ ಸಂಪರ್ಕವಿದೆ. ನಿಮಗೆ ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಈ ನಾಜೂಕಿನ ಮಾತಿಗೆ ಗುತ್ತಿಗೆದಾರ ಮರುಳಾಗಿದ್ದಾನೆ. ತನ್ನ ಪತ್ನಿ ಉದ್ಯೋಗ ಕೊಡಿಸುವಂತೆ ಮನು ಮನವಿ ಮಾಡಿದ್ದಾನೆ. ಆಗ ₹30 ಲಕ್ಷಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದಾರೆ.

ಕೊನೆಗೆ ಮಾತುಕತೆ ನಡೆದು ₹20 ಲಕ್ಷಕ್ಕೆ ಡೀಲ್ ಆಗಿದ್ದು, ಹಂತ ಹಂತವಾಗಿ ಆ ಹಣ ಕೂಡ ಸಂದಾಯವಾಗಿದೆ. ನಂತರ ಐಎಎಸ್‌ ಅಧಿಕಾರಿ ಹರ್ಷವರ್ಧನ್‌ ಎಂಬ ಹೆಸರಿನಲ್ಲಿ ಸುಳ್ಳು ಸಂದರ್ಶನ ಪತ್ರವನ್ನು ಸೃಷ್ಟಿಸಿದ್ದ ಗಿರೀಶ್‌, ಈ ಪತ್ರವನ್ನು ಮನುಗೆ ನೀಡಿ ತಮ್ಮ ಪತ್ನಿಯನ್ನು ಸಂದರ್ಶನಕ್ಕೆ ಕರೆತರುವಂತೆ ಸೂಚಿಸಿದ್ದ.


ಕಬ್ಬನ್‌ ಪಾರ್ಕ್‌ನಲ್ಲಿರುವ ಸಚಿವಾಲಯ ಕ್ಲಬ್‌ನಲ್ಲಿರುವ ಚನ್ನಬಸಪ್ಪ ಸಭಾಂಗಣದಲ್ಲಿ ಓರ್ವ ಮಹಿಳೆ ಸೇರಿದಂತೆ ಐವರು ಸದಸ್ಯರ ಸಂದರ್ಶಿಸಿದರು. ತರುವಾಯ 2025 ಅಕ್ಟೋಬರ್‌ 9ರಂದು ನಕಲಿ ನೇಮಕಾತಿ ಆದೇಶವನ್ನು ಮನುಗೆ ಗಿರೀಶ್ ಕೊಟ್ಟಿದ್ದ. ಆದರೆ ಈ ನೇಮಕಾತಿ ಪತ್ರ ಹಿಡಿದು ಇಲಾಖೆಗೆ ಸೇರಲು ಹೋದಾಗಲೆ ವಂಚನೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.