ಬೆಂಗಳೂರಿನಲ್ಲಿ ಅನಿರೀಕ್ಷಿತ ಧಾರಾಕಾರ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಗೆ ಬಿದ್ದ ಮರಕ್ಕೆ ಮಗು ಬಲಿ

| N/A | Published : Mar 23 2025, 01:38 AM IST / Updated: Mar 23 2025, 04:41 AM IST

ಬೆಂಗಳೂರಿನಲ್ಲಿ ಅನಿರೀಕ್ಷಿತ ಧಾರಾಕಾರ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಗೆ ಬಿದ್ದ ಮರಕ್ಕೆ ಮಗು ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಬಿದ್ದ ಅನಿರೀಕ್ಷಿತ ಧಾರಾಕಾರ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಗೆ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಮರದ ಕೊಂಬೆ ಬಿದ್ದು, ಮೂರು ವರ್ಷದ ಮಗು ಮೃತಪಟ್ಟ ಘಟನೆ ನಡೆಸಿದಿದೆ.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಬಿದ್ದ ಅನಿರೀಕ್ಷಿತ ಧಾರಾಕಾರ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಗೆ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಮರದ ಕೊಂಬೆ ಬಿದ್ದು, ಮೂರು ವರ್ಷದ ಮಗು ಮೃತಪಟ್ಟ ಘಟನೆ ನಡೆಸಿದಿದೆ.

ಯಲಹಂಕ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದರೆ, ಕೋಗಿಲು ಕ್ರಾಸ್‌ ಸೇರಿದಂತೆ ಮೊದಲಾದ ಕಡೆ ರಸ್ತೆಗಳಲ್ಲಿ ಭಾರೀ ಪ್ರಮಾಣ ನೀರು ನಿಂತು ವಾಹನ ಸಂಚಾರವನ್ನು ದುಸ್ತರಗೊಳಿಸಿತ್ತು.

ನಿರೀಕ್ಷೆಯಂತೆ ಶನಿವಾರ ಪೂರ್ವ ಮುಂಗಾರು ಅವಧಿಯ ಮಳೆ ತನ್ನ ಆರ್ಭಟವನ್ನು ಶುರು ಮಾಡಿದೆ. ಪ್ರಸಕ್ತ ಸಾಲಿನ ಮೊದಲ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದ್ದು, ಅದರಲ್ಲೂ ಉತ್ತರ ಭಾಗದ ನಾಗರಿಕರಿಗೆ ಮತ್ತೆ ಸಂಕಷ್ಟ ತಂದೊಡ್ಡಿ ಆತಂಕವನ್ನು ಹೆಚ್ಚಿಸಿದೆ. ಕಳೆದ ಮುಂಗಾರು ಅವಧಿಯಲ್ಲಿಯೂ ಸಹ ಬೆಂಗಳೂರು ಉತ್ತರ ಭಾಗದ ಯಲಹಂಕ, ಕೋಗಿಲು ಕ್ರಾಸ್ ಸೇರಿದಂತೆ ಮೊದಲಾದ ಪ್ರದೇಶಗಳು ನೀರಿನಲ್ಲಿ ಮುಳುಗಡೆ ಆಗಿದ್ದವು. ಇದೀಗ ಮತ್ತೆ ಅಂತಹದ್ದೇ ಪರಿಸ್ಥಿತಿ ಪೂರ್ವ ಮುಂಗಾರು ಅವಧಿಯಲ್ಲಿಯೇ ಸೃಷ್ಟಿಯಾಗಿದೆ.

ಶನಿವಾರ ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಮತ್ತು ಸೂರ್ಯನ ನಡುವೆ ಕಣ್ಣಾಮುಚ್ಚಾಲೆ ಆಟ ಶುರುವಾಗಿತ್ತು. ಸಂಜೆಯಾಗುತ್ತಿದಂತೆ ಭಾರೀ ಗಾಳಿಯಿಂದ ಮಳೆ ಆರಂಭಗೊಂಡು ಧಾರಾಕಾರ ಮಳೆಯೊಂದಿಗೆ ಗುಡುಗು, ಮಿಂಚಿನ ಆರ್ಭಟ ಕಂಡು ಬಂತು.

ಸಂಜೆ ಆರಂಭಗೊಂಡ ಮಳೆಯು ಮೊದಲು ಸುಮಾರು 30 ರಿಂದ 50 ನಿಮಿಷದ ವರೆಗೆ ಧಾರಾಕಾರವಾಗಿ ಸುರಿಯಿತು. ತದ ನಂತರ ನಗರದ ವಿವಿಧ ಭಾಗಗಳಿಗೆ ನಿಧಾನವಾಗಿ ವ್ಯಾಪಿಸಿತ್ತು. ಬಳಿಕ ಮುಂಗಾರು ಅವಧಿಯಲ್ಲಿ ಹಾಗೂ ಸೈಕ್ಲೋನ್‌ ಸಂದರ್ಭದಲ್ಲಿ ಮಳೆ ಸುರಿದಂತೆ ಒಂದೇ ಸಮನೇ ತಡ ರಾತ್ರಿ ವರೆಗೆ ಮಳೆ ಸುರಿಯಿತು. 

ಮಳೆಗೆ ಹಣ್ಣು ಮಗು ಬಲಿ

ಪುಲಕೇಶಿನಗರದಲ್ಲಿ ತಂದೆ ಶಕ್ತಿಯೊಂದಿಗೆ ರಾತ್ರಿ 8.30ರ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಏಕಾಏಕಿ ಮರ ಸಂಪೂರ್ಣವಾಗಿ ಧರೆಗುರುಳಿದೆ. ಈ ವೇಳೆ ಮರದ ಕೊಂಬೆ ನೇರವಾಗಿ ರಕ್ಷಾ (3) ತಲೆಯ ಮೇಲೆ ಬಿದ್ದಿದೆ. ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಮಗುವಿನ ತಲೆಯಿಂದ ತೀವ್ರ ರಕ್ತಸ್ತಾವ ಆಗಿದೆ. ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ.

ಮೃತ ಮಗು ಕಂಬನಹಳ್ಳಿಯ ನಿವಾಸಿಯಾಗಿದ್ದು, ತಂದೆಯ ಬೇಕರಿ ಅಂಗಡಿಯಿಂದ ಮನೆಗೆ ಹೋಗುವ ವೇಳೆ ಪೂರ್ವ ಪಾರ್ಕ್‌ ಬಳಿ ಈ ಘಟನೆ ನಡೆದಿದೆ. 

ಮನೆಗೆ ನುಗ್ಗಿ ಅವಾಂತರ

ಯಲಹಂಕದ ಓಲ್ಡ್‌ ಟೌನ್‌ ಭಾಗದ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿದೆ. ನೀರು ಮನೆಗಳಿಗೆ ನುಗ್ಗಿದರಿಂದ ಮನೆಯಲ್ಲಿದ್ದ ಅಗತ್ಯ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ರಾಜಕಾಲುವೆಗೆ ಮಣ್ಣು ತುಂಬಿಕೊಂಡ ಪರಿಣಾಮ ಬಿದ್ದ ಮಳೆ ನೀರು ಹರಿದು ಹೋಗುವುದಕ್ಕೆ ಅವಕಾಶ ಇಲ್ಲದೇ ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಟ್ರಾಫಿಕ್‌ ಜಾಮ್‌

ಸುರಿದ ಮಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯ ಕೋಗಿಲು ಕ್ರಾಸ್‌ ಬಳಿ ಭಾರೀ ಪ್ರಮಾಣ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿತ್ತು. ಮಾನ್ಯತಾ ಟೆಕ್‌ ಪಾಕ್‌ ಬಳಿಯೂ ಅದೇ ರೀತಿ ಮಳೆ ನೀರು ನಿಂತು ಸಮಸ್ಯೆ ಉಂಟಾಗಿತ್ತು.ಧರೆಬಿದ್ದ ಮರಗಳು

ಬೆಂಗಳೂರು ಪೂರ್ವ, ಉತ್ತರ ಭಾಗ ಹಾಗೂ ಮಹದೇವಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣ ಮಳೆ ಬಿದ್ದ ಹಿನ್ನೆಲೆಯಲ್ಲಿ ಸುಮಾರು 30 ರಿಂದ 50 ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದ ವರದಿಯಾಗಿದೆ. ಸದಾಶಿವನಗರದ 10ನೇ ಕ್ರಾಸ್‌ ನಲ್ಲಿ ಮರದ ಕೊಂಬೆ ಬಿದ್ದು, ಕಾರಿಗೆ ಮುಂಭಾಗದ ಗಾಜಿಗೆ ಹಾನಿಯಾದ ಘಟನೆ ನಡೆದಿದೆ. ಇದರಿಂದ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ. 

ಆಲಿಕಲ್ಲು ಮಳೆ

ಮೇಖ್ರಿ ಸರ್ಕಲ್, ಸಂಜಯನಗರ, ಭೂಪಸಂದ್ರ, ಯಲಹಂಕ ಮತ್ತು ಹೆಬ್ಬಾಳ ಸುತ್ತಮುತ್ತ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಆಗಿದೆ.

ಜಕ್ಕೂರಿನಲ್ಲಿ ಐದು ಸೆಂ.ಮೀ ಮಳೆ

ಶನಿವಾರ ಜಕ್ಕೂರು, ಚೌಡೇಶ್ವರಿಯಲ್ಲಿ ಅತಿ ಹೆಚ್ಚು 5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಹಗದೂರು, ವಿ,ನಾಗೇನಹಳ್ಳಿಯಲ್ಲಿ ತಲಾ 3.4, ವಿದ್ಯಾರಣ್ಯಪುರದಲ್ಲಿ 3.2, ಹೊರಮಾವು, ಬಿಳೆಕಹಳ್ಳಿಯಲ್ಲಿ ತಲಾ 2.1, ಬಸವನಪುರ 1.9, ಗರುಡಾಚಾರಪಾಳ್ಯ 1.8, ಬಿಟಿಎಂ ಲೇಔಟ್‌ 1.7, ರಾಮಮೂರ್ತಿನಗರ ಹಾಗೂ ಕೊಡಿಗೆಹಳ್ಳಿಯಲ್ಲಿ ತಲಾ 1.6 ಹಾಗೂ ಕಾಡುಗೂಡಿಯಲ್ಲಿಯಲ್ಲಿ 1.5 ಸೆಂ.ಮೀ ನಷ್ಟು ಮಳೆಯಾಗಿದೆ. ನಗರದಲ್ಲಿ ಶನಿವಾರ ರಾತ್ರಿ 10.30ರ ವೇಳೆಗೆ 9.5 ಮಿ.ಮೀ ನಷ್ಟು ಮಳೆಯಾಗಿದೆ. ಭಾನುವಾರವೂ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಮಸ್ಯೆ ಆದರೆ 1533ಕ್ಕೆ ಕರೆ ಮಾಡಿ

ನಗರದಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ವಲಯ ಆಯುಕ್ತರು ಮೇಲ್ವಿಚಾರಣೆ ಮಾಡಬೇಕು. ರಸ್ತೆ ಮೂಲ ಸೌಕರ್ಯ ಮತ್ತು ರಾಜಕಾಲುವೆ ವಿಭಾಗದ ಎಂಜಿನಿಯರ್ ಗಳು ಹಾಗೂ ಅರಣ್ಯ ವಿಭಾಗದ ಸಿಬ್ಬಂದಿ, ತಕ್ಷಣವೇ ಪರಿಶೀಲನೆ ನಡೆಸಬೇಕು. ರಸ್ತೆಗಳಲ್ಲಿ ನೀರು ನಿಂತಿರುವ ಹಾಗೂ ಮರ, ಮರದ ಕೊಂಬೆಗಳನ್ನು ಕೂಡಲೆ ತೆರವುಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಸೂಚಿಸಿದ್ದಾರೆ. ಸಮಸ್ಯೆ ಉಂಟಾದರೆ ಬಿಬಿಎಂಪಿಯ ಸಹಾಯವಾಣಿ ಸಂಖ್ಯೆ 1533ಗೆ ಕರೆ ಮಾಡಿ ದೂರು ನೀಡುವಂತೆ ಸಾರ್ವಜನಿಕರನ್ನು ಕೋರಿದ್ದಾರೆ.