ಪ್ರಭಾರ ಡಿಜಿ-ಐಜಿಪಿಯಾಗಿ ಇಂದು ಸಿಐಡಿ ಡಿಜಿಪಿ ಡಾ.ಸಲೀಂ ಆಯ್ಕೆ?

| Published : May 21 2025, 12:26 AM IST

ಪ್ರಭಾರ ಡಿಜಿ-ಐಜಿಪಿಯಾಗಿ ಇಂದು ಸಿಐಡಿ ಡಿಜಿಪಿ ಡಾ.ಸಲೀಂ ಆಯ್ಕೆ?
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರ ಸೇವಾವಧಿ ಬುಧವಾರ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾಗಲಿರುವ ಹುದ್ದೆಗೆ ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಆಯ್ಕೆ ಬಹುತೇಕ ಖಚಿತವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರ ಸೇವಾವಧಿ ಬುಧವಾರ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರಿಂದ ತೆರವಾಗಲಿರುವ ಹುದ್ದೆಗೆ ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಆಯ್ಕೆ ಬಹುತೇಕ ಖಚಿತವಾಗಿದೆ.

ಕೆಲ ದಿನಗಳ ಮಟ್ಟಿಗೆ ಪ್ರಭಾರಿ ಡಿಜಿ-ಐಜಿಪಿಯಾಗಿ ಸಲೀಂ ಅವರನ್ನು ನೇಮಿಸಿ ತದನಂತರ ಕೇಂದ್ರ ಲೋಕಸೇವಾ ಆಯೋಗದ ಸಮ್ಮತಿ ಬಳಿಕ ಅವರನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.

ಸೇವಾ ಹಿರಿತನ ಆಧಾರದ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್‌, ಸಿಐಡಿ ಡಿಜಿಪಿ ಸಲೀಂ, ಸೈಬರ್ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಸೇರಿ ಏಳು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿದ್ದಾರೆ. ಆದರೆ ಹಿರಿತನದ ಮಾನದಂಡದಲ್ಲಿ ಡಿಜಿ-ಐಪಿಪಿ ಹುದ್ದೆಗೆ ಸಲೀಂ ಹಾಗೂ ಪ್ರಶಾಂತ್ ಮುಂಚೂಣಿಯಲ್ಲಿದ್ದಾರೆ.

ಈಗಾಗಲೇ ನೂತನ ಡಿಜಿ-ಐಜಿಪಿ ಆಯ್ಕೆ ಸಂಬಂಧ ಏಳು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಸರ್ಕಾರ ಶಿಫಾರಸು ಮಾಡಿದೆ. ಆದರೆ ಯುಪಿಎಸ್‌ನಿಂದ ಕ್ಲಿಯರೆನ್ಸ್ ಸಿಗದ ಕಾರಣ ಮೊದಲು ಮೂರು ತಿಂಗಳು ಪ್ರಭಾರ ಡಿಜಿ-ಐಜಿಪಿ ನೇಮಕವಾಗಲಿದೆ. ಯುಪಿಎಸ್‌ಸಿ ಸಮ್ಮತಿ ಬಳಿಕ ಕಾಯಂ ಡಿಜಿ-ಐಜಿಪಿ ಆಗಲಿದ್ದಾರೆ ಎಂದು ಮೂಲಗಳು ಹೇಳಿವೆ.

ಏ.30 ರಂದು ಅಲೋಕ್‌ ಮೋಹನ್‌ ಅವರು ನಿವೃತ್ತಿಯಾಗಬೇಕಿತ್ತು. ಆದರೆ ಮೇ 21ರವರೆಗೆ ಡಿಜಿ-ಐಜಿಪಿ ಅವರ ಸೇವಾವಧಿ ವಿಸ್ತರಿಸಿದ್ದ ಸರ್ಕಾರ, ಮುಂದಿನ ಡಿಜಿ-ಐಜಿಪಿ ಹುದ್ದೆಗೆ ಸಂಭವನೀಯ ಅಧಿಕಾರಿಗಳ ಪಟ್ಟಿ ಯುಪಿಎಸ್‌ಸಿಗೆ ಕಳುಹಿಸಿತ್ತು. ಹೀಗಾಗಿ ಎರಡು ವರ್ಷಗಳ ಆಡಳಿತ ನಡೆಸಿದ ಹಾಲಿ ಡಿಜಿ-ಐಜಿಪಿ ಅಲೋಕ್ ಮೋಹನ್‌ ಅವರ ಸೇವಾವಧಿ ಮೇ 21 ರಂದು ಮುಕ್ತಾಯವಾಗಲಿದ್ದು, ಅಂದು ಸಂಜೆ ಆರಕ್ಷಕ ಪಡೆಯ ಹೊಸ ದಂಡನಾಯಕ ಆಯ್ಕೆ ನಡೆಯಬೇಕಿದೆ. ಇನ್ನು ಡಿಜಿ-ಐಜಿಪಿ ಅ‍ವರ ನಿರ್ಗಮನ ಸೂಚನೆಯಾಗಿ ಪ್ರಶಂಸನಾ ಸೇವಾ ಪರೇಡ್ ಸಹ ಆಯೋಜನೆಯಾಗಿದೆ.