ಟ್ರಾಫಿಕ್‌ ನಿಯಮ ಉಲ್ಲಂಘನೆಕೇಸ್‌ 2 ಭಾಗವಾಗಿ ವಿಂಗಡಣೆ

| Published : Dec 17 2023, 01:45 AM IST

ಟ್ರಾಫಿಕ್‌ ನಿಯಮ ಉಲ್ಲಂಘನೆಕೇಸ್‌ 2 ಭಾಗವಾಗಿ ವಿಂಗಡಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಎರಡು ವರ್ಗಗಳಾಗಿ ವರ್ಗೀಕರಣ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೋಟಾರು ವಾಹನ ಕಾಯ್ದೆ/ನಿಯಮದ ಅಡಿಯಲ್ಲಿ ದಾಖಲಿಸುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಎರಡು ವರ್ಗಗಳಾಗಿ ವರ್ಗೀಕರಿಸಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸೀಮಂತ್‌ ಕುಮಾರ್‌ ಸಿಂಗ್‌ ಸುತ್ತೋಲೆ ಹೊರಡಿಸಿದ್ದಾರೆ.

ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ದಾಖಲಿಸುತ್ತಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ಬಗ್ಗೆ ವಿಸ್ತಾರವಾಗಿ ಅರಿತುಕೊಳ್ಳುವ ಸಲುವಾಗಿ ಸಂಚಾರ ನಿಯಮ ಉಲ್ಲಂಘನೆಗಳನ್ನು 2 ವರ್ಗಗಳಲ್ಲಿ ವಿಂಗಡಿಸಲಾಗಿದೆ. ವರ್ಗ-1ರ ಅಡಿಯಲ್ಲಿನ ಉಲ್ಲಂಘನೆಗಳು ಗುರುತರ ಉಲ್ಲಂಘನೆಗಳಾಗಿರುತ್ತದೆ. ಪ್ರಕರಣಗಳನ್ನು ದಾಖಲಿಸುವಾಗ ವರ್ಗ-1ರ ಉಲ್ಲಘನೆಗಳಿಗೆ ಪ್ರಥಮ ಆದ್ಯತೆ ನೀಡುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ರಾಜ್ಯದ ಎಲ್ಲಾ ನಗರ ಮತ್ತು ಜಿಲ್ಲಾ ಘಟಕಗಳಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಿ ಸಾಗಲು ಹಾಗೂ ಅಪಘಾತಗಳ ನಿಯಂತ್ರಣ ಮಾಡಲು ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ ನಿಯಮಾವಳಿ ಹಾಗೂ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದಾಗಲೇ ಅಪಘಾತಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ತಿಳಿಸಲಾಗಿದೆ.

ನಿಯಮ ಜಾರಿ ವೇಳೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರು/ಸವಾರರ ವಿರುದ್ಧ ಮೋಟಾರು ವಾಹನ ನಿಯಮ/ಕಾಯ್ದೆ ಅಡಿಯಲ್ಲಿ ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸಿರುವುದು ಸರಿಯಷ್ಟೆ. ಈ ಉಲ್ಲಂಘನೆಗಳಲ್ಲಿ ಗುರುತರ ಉಲ್ಲಂಘನೆಗಳು ಯಾವುವು ಎಂಬುದರ ಬಗ್ಗೆ ಸರಿಯಾದ ಅರಿವು ಮೂಡಿಸಿಕೊಂಡು ಮತ್ತು ಕ್ರಮಬದ್ಧ ವಿಧಾನಗಳ ಸೂಕ್ತ ಪಾಲನೆ ಮಾಡಿದಲ್ಲಿ ಮಾತ್ರ ನಿಯಮ ಜಾರಿಯ ಉದ್ದೇಶ ಸಫಲವಾಗುತ್ತದೆ ಎಂದು ಸುತ್ತೋಲೆ ಹೇಳಿದೆ.

ವರ್ಗ-1ರ ಅಡಿಯಲ್ಲಿ ಬರುವ

ಗುರುತರ ಉಲ್ಲಂಘನೆಗಳು

ಮದ್ಯಪಾನ ಮಾಡಿ ಚಾಲನೆ, ಅತೀ ವೇಗ ಚಾಲನೆ, ಅಜಾಗರೂಕ ಚಾಲನೆ, ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ, ಟ್ರಾಫಿಕ್‌ ಸಿಗ್ನಲ್‌ ಜಂಪ್‌, ಫ್ರೀ ವೀಲ್ಹಿಂಗ್‌, ರೇಸಿಂಗ್ ಮತ್ತು ವೇಗದ ಪ್ರಯೋಗ, ಶಿಸ್ತು ಪಥ ಚಾಲನೆ ಮಾಡದೇ ಇರುವುದು, ಅಡ್ಡಾದಿಡ್ಡಿ ವಾಹನ ಚಾಲನೆ, ವಾಹನಗಳನ್ನು ತಪ್ಪು ಮತ್ತು ಅಪಾಯಕಾರಿ ರೀತಿಯಲ್ಲಿ ನಿಲ್ಲಿಸುವುದು, ಬಿಎಂಟಿಸಿ ನಿಲ್ದಾಣದಲ್ಲಿ ಇತರೆ ವಾಹನಗಳ ನಿಲುಗಡೆ ಮಾಡುವುದು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದಿರುವುದು, ಸೀಟ್‌ ಬೆಲ್ಟ್‌ ಧರಿಸದಿರುವುದು, ತ್ರಿಬಲ್‌ ರೈಡಿಂಗ್‌ ಸೇರಿದಂತೆ ಇತರೆ ಉಲ್ಲಂಘನೆಗಳು.

ವರ್ಗ-2ರಡಿಯಲ್ಲಿನ

ಉಲ್ಲಂಘನೆಗಳು

ಹೈಬೀಮ್ ಲೈಟ್‌ ಗಳನ್ನು ಹಾಕುವುದು, ಕರ್ಕಶ ಹಾರ್ನ್‌ ಬಳಕೆ, ನಿಷಿದ್ಧ ಪ್ರದೇಶಗಳಲ್ಲಿ ಹಾರ್ನ್ ಬಳಸುವುದು, ದೋಷಪೂರಿತ ಸೈಲೆನ್ಸರ್ ಬಳಕೆ, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ, ಪಾದಚಾರಿ ಮಾರ್ಗ ಒತ್ತುವರಿ, ಪರ್ಮಿಟ್‌ ಇಲ್ಲದೆ ವಾಹನ ಚಾಲನೆ, ಆಟೋ ಚಾಲಕರು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಬೇಡಿಕೆ, ಆಟೋ ಚಾಲಕ ಬಾಡಿಗೆಗೆ ಕರೆದಾಗ ಬಾರದಿರುವುದು, ಡಿಸ್‌ಪ್ಲೇ ಕಾರ್ಡ್‌ ಹಾಕದಿರುವುದು, ದೋಷಪೂರಿತ ನೋಂದಣಿ ಫಲಕ ಅಳವಡಿಕೆ ಸೇರಿದಂತೆ ಇತರೆ ಉಲ್ಲಂಘನೆಗಳು.