ಕೊಬ್ಬರಿ ಶೆಡ್‌ಗೆ ಬೆಂಕಿ ಬಿದ್ದು ಲಕ್ಷಾಂತರ ರು. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ಮಂಡ್ಯ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಕಿಡಿಗೇಡಿಗಳ ಕೃತ್ಯವೋ ಅಥವಾ ಆಕಸ್ಮಿಕ ಬೆಂಕಿಯಿಂದಾಗಿ ಮಧ್ಯಾಹ್ನ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಮಂಡ್ಯ:

ಕೊಬ್ಬರಿ ಶೆಡ್‌ಗೆ ಬೆಂಕಿ ಬಿದ್ದು ಲಕ್ಷಾಂತರ ರು. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ಪುಟ್ಟೇಗೌಡರ ಪುತ್ರ ಜಿ.ಪಿ.ಪ್ರಸನ್ನ ಅವರು ಕಾಯಿ ವ್ಯಾಪಾರಿಯಾಗಿದ್ದು, ಕೊಬ್ಬರಿ ಖರೀದಿಸಿ ತಮ್ಮ ಶೆಡ್‌ನಲ್ಲಿ ಇಟ್ಟಿದ್ದರು. ಕಿಡಿಗೇಡಿಗಳ ಕೃತ್ಯವೋ ಅಥವಾ ಆಕಸ್ಮಿಕ ಬೆಂಕಿಯಿಂದಾಗಿ ಮಧ್ಯಾಹ್ನ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಇಡೀ ಶೆಡ್ ನಲ್ಲಿದ್ದ ಕೊಬ್ಬರಿ ಸಹಿತ ಮನೆಯ ಎಲ್ಲಾ ಅಗತ್ಯ ವಸ್ತುಗಳು ಸುಟ್ಟು ಕರಲಾಗಿ 12 ಟನ್ ಕೊಬ್ಬರಿ ಸೇರಿ ಸುಮಾರು 55 ಲಕ್ಷ ರು. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ವಿಷಯ ತಿಳಿದು ಎರಡು ಅಗ್ನಿಶಾಮಕದಳ ತಂಡದ ಸಿಬ್ಬಂದಿ ಸತತ ಪ್ರಯತ್ನಗಳಿಂದಾಗಿ ಬೆಂಕಿ ನಂದಿಸಿದಾದರೂ ಅಷ್ಟರಾಗಲೇ ಶೆಡ್ ನಲ್ಲಿದ್ದ ಕೊಬ್ಬರಿ ಸುಟ್ಟು ನಾಶವಾಗಿದೆ. ಮಧ್ಯಮ ಕುಟುಂಬ ವರ್ಗದ ಜಿ.ಪಿ.ಪ್ರಸನ್ನ ಅವರು ಕೊಬ್ಬರಿ, ಕಾಯಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ತೋಟದ ಶೆಡ್ ನಲ್ಲಿ ಶೇಖರಿಸಿಟ್ಟಿದ್ದ ಕೊಬ್ಬರಿ ಸುಟ್ಟು ನಾಶವಾಗಿರುವುದರಿಂದ ಕಂಗಾಲಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಸಹಾಯಕ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಕೊಬ್ಬರಿ ಶೆಡ್ ಗೆ ಕಿಡಿಗೇಡಿಗಳು ಅಥವಾ ಆಕಸ್ಮಿಕ ಬೆಂಕಿ ತಗಲಿರುವ ಬಗ್ಗೆ ತನಿಖೆ ನಡೆಯಬೇಕಿದೆ. ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಗೆ ಜಿ.ಪಿ.ಪ್ರಸನ್ನ ದೂರು ನೀಡಿದ್ದಾರೆ.