ಸಾರಾಂಶ
ಬೆಂಗಳೂರು : ಬಿಡಿ ಮಾತ್ರೆಗಳನ್ನು ನೀಡಲು ನಿರಾಕರಿಸಿದ ಮೆಡಿಕಲ್ ಶಾಪ್ ವಿರುದ್ಧ ನಗರದ ನಿವಾಸಿಯೊಬ್ಬರು ರಾಜ್ಯ ಔಷಧಿ ನಿಯಂತ್ರಕರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ನರಸಿಂಹಮೂರ್ತಿ ಎಂಬುವರು ಮೇ 5ರಂದು ಹಲಸೂರಿನ ಟ್ರಸ್ಟ್ ಡ್ರಗ್ಗಿಸ್ಟ್ಸ್ ಆ್ಯಂಡ್ ಕೆಮಿಸ್ಟ್ಸ್ ಮೆಡಿಕಲ್ ಶಾಪ್‌ಗೆ ತೆರಳಿ ವೈದ್ಯರು ಬರೆದುಕೊಟ್ಟಿದ್ದ ಚೀಟಿ ತೋರಿಸಿ ಮಾತ್ರೆಗಳನ್ನು ಕೇಳಿದ್ದಾರೆ. ಮೂರು ಮಾದರಿಯ ಮಾತ್ರೆಗಳ ಪೈಕಿ ಒಂದು ಮಾದರಿ ಮಾತ್ರೆಯ ಬೆಲೆ ₹800 ಕ್ಕಿಂತ ಹೆಚ್ಚು ಇತ್ತು. ಆದರೆ, ಅಷ್ಟು ಹಣ ಅವರ ಬಳಿ ಇಲ್ಲದ ಕಾರಣ, ಮೂರು ಮಾತ್ರೆ ಕೇಳಿದ್ದಾರೆ. ಆದರೆ ಮಳಿಗೆಯ ನೌಕರ 14 ಮಾತ್ರೆಗಳ ಶೀಟ್ ಮಾತ್ರ ಕೊಡುತ್ತೇವೆ. ಬಿಡಿಯಾಗಿ ಇಲ್ಲ ಎಂದರು. ಆದರೆ, ಆ ಕ್ಷಣದಲ್ಲಿ ನನ್ನ ಬಳಿ ಅಷ್ಟು ಹಣ ಇರಲಿಲ್ಲ. ಹೀಗಾಗಿ, ಮೂರು ಮಾತ್ರೆ ನೀಡಿ ಎಂದು ಮನವಿ ಮಾಡಿದರೂ ಒಪ್ಪಲಿಲ್ಲ. ಹೀಗಾಗಿ, ಮನೆಗೆ ಹೋಗಿ ಹಣ ತಂದು ಒಂದು ಶೀಟ್ ಮಾತ್ರೆ ತೆಗೆದುಕೊಳ್ಳಬೇಕಾಯಿತು. ಕೂಡಲೇ ಪಾವತಿ ಮಾಡಲು ಹಣ ಇಲ್ಲದ ಬಡವರಾದರೆ ಮಾತ್ರೆ, ಔಷಧಿಗಳಿಂದ ವಂಚಿತರಾಗಬೇಕೇ ಎಂದು ದೂರಿನಲ್ಲಿ ಪ್ರಶ್ನಿಸಿದ್ದಾರೆ.
ಏಕೆ ಬಿಡಿ ಮಾತ್ರೆ ನೀಡಲ್ಲ?
ಮಾತ್ರೆಗಳ ಶೀಟ್ ಮೇಲೆ ದಿನಾಂಕ, ಅವಧಿ ಮತ್ತು ದರ ವಿವರ ನಮೂದಾಗಿರುತ್ತದೆ. ಬಿಡಿಯಾಗಿ ನೀಡಿದಾಗ ಆ ವಿವರಗಳು ಪ್ರತ್ಯೇಕವಾಗುತ್ತವೆ. ಇದರಿಂದ ಕೆಲವು ಗ್ರಾಹಕರು ಅನುಮಾನ ಪಡುತ್ತಾರೆ, ನಿರಾಕರಿಸುವ ಘಟನೆಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಕೆಲವು ಮೆಡಿಕಲ್ ಶಾಪ್‌ಗಳು ಬಿಡಿ ಮಾತ್ರೆಗಳನ್ನು ನೀಡಲು ನಿರಾಕರಿಸುತ್ತಾರೆ ಎನ್ನಲಾಗಿದೆ.
ಪೂರ್ತಿ ಶೀಟ್ ಖರೀದಿ ನಿಯಮವಿಲ್ಲ: ಅಧಿಕಾರಿ
ವೈದ್ಯರು ಬರೆದಿರುವ ಮಾತ್ರೆಗಳನ್ನು ಗ್ರಾಹಕರ ಅಗತ್ಯತೆ, ಹಣಕಾಸಿನ ಸಾಮರ್ಥ್ಯಕ್ಕೆ ತಕ್ಕಂತೆ ಬಿಡಿಯಾಗಿಯೂ ನೀಡಬೇಕು. ಪೂರ್ತಿ ಶೀಟ್ ತೆಗೆದುಕೊಳ್ಳಬೇಕು ಎಂಬ ನಿಯಮ ಇಲ್ಲ ಎಂದು ಔಷಧಿ ನಿಯಂತ್ರಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.