ಕಂಟೈನರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

| Published : Oct 09 2025, 02:00 AM IST

ಸಾರಾಂಶ

ಬೈಕ್ ಮತ್ತು ಕಂಟೈನರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ನಾಗಮಂಗಲ ತಾಲೂಕಿನ ಕೊಣನೂರು ಸಮೀಪದ ಬಾವಿಕೊಪ್ಪಲು ಗೇಟ್ ಬಳಿ ಸಂಭವಿಸಿದೆ.

ನಾಗಮಂಗಲ:

ಬೈಕ್ ಮತ್ತು ಕಂಟೈನರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಕೊಣನೂರು ಸಮೀಪದ ಬಾವಿಕೊಪ್ಪಲು ಗೇಟ್ ಬಳಿ ಬುಧವಾರ ಸಂಭವಿಸಿದೆ.

ತಾಲೂಕಿನ ಹೊಣಕೆರೆ ಹೋಬಳಿಯ ಹೊನ್ನಬೆಟ್ಟದ ಹೊಸೂರು ಗ್ರಾಮದ ಶಂಕರೇಗೌಡರ ಮಗ ಶಶಿಕುಮಾರ್ (34) ಘಟನೆಯಲ್ಲಿ ಸಾವನ್ನಪ್ಪಿರುವ ನತದೃಷ್ಟ ಬೈಕ್ ಸವಾರ.

ಕಾರ್ಯನಿಮಿತ್ತ ಬ್ರಹ್ಮದೇವರಹಳ್ಳಿಗೆ ತಮ್ಮ ಬೈಕ್ ನಲ್ಲಿ ತೆರಳಿದ್ದ ಶಶಿಕುಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಪಸ್ ಬರುತ್ತಿದ್ದ ವೇಳೆ ನಾಗಮಂಗಲ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ರಾಜಸ್ಥಾನ ಮೂಲದ (ಆರ್‌ಜೆ 14-ಜಿಎಚ್ 0878 ) ಕಂಟೈನರ್ ವಾಹನ ಮುಖಾಮುಖಿ ಡಿಕ್ಕಿಹೊಡೆದು ಈ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಜಖಂಗೊಂಡು ಶಶಿಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ ಶಶಿಕುಮಾರ್ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಬೈಕ್ ಮತ್ತು ಕಂಟೈನರ್ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ವಹಿಸಿದ್ದಾರೆ.

ಟ್ರ್ಯಾಕ್ಟರ್ ಡಿಕ್ಕಿ: ಪಾದಚಾರಿ ಸಾವು

ನಾಗಮಂಗಲ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಿಂಬದಿಯಿಂದ ಟ್ರ್ಯಾಕ್ಟರ್ ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟಿರುವ ಘಟನೆ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ಸಂಭವಿಸಿದೆ.

ಗ್ರಾಮದ ಲೇಟ್ ರಾಮೇಗೌಡರ ಪುತ್ರ ಬಸವಲಿಂಗೇಗೌಡ ಅಲಿಯಾಸ್ ಪಾಪ (53) ಸಾವನ್ನಪ್ಪಿರುವ ನತದೃಷ್ಟ. ಕಾರ್ಯನಿಮಿತ್ತ ಸಮೀಪದ ಬಿದರಕೆರೆ ಗ್ರಾಮಕ್ಕೆ ಹೋಗಿ ವಾಪಸ್ ಸ್ವಗ್ರಾಮಕ್ಕೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ಬಸವಲಿಂಗೇಗೌಡರನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ಕೊಟ್ಟ ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್‌ಐ ಮಾರುತಿ ಪರಿಶೀಲನೆ ನಡೆಸಿದರು.

ಬುಧವಾರ ಬೆಳಗ್ಗೆ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಬಸವಲಿಂಗೇಗೌಡರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಿಂಡಿಗನವಿಲೆ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮ ವಹಿಸಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ: ವೃದ್ಧ ಸಾವು

ಕೆ.ಆರ್.ಪೇಟೆ: ಬೆಂಗಳೂರು - ಜಲಸೂರು ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಗುದ್ದಿ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಬಳಿಯ ದಡದಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಚನ್ನೇಗೌಡ (62) ಸ್ಥಳದಲ್ಲಿಯೇ ಮೃತಪಟ್ಟವರು. ಇಂದು ಬೆಳಗ್ಗೆ ಮೃತ ಚನ್ನೇಗೌಡ ಸೈಕನಲ್ಲಿ ತೆರಳುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಅಪರಿಚಿತ ವಾಹನ ಹಿಂಬದಿಯಿಂದ ಗುದ್ದಿ ಪರಾರಿಯಾಗಿದೆ. ಚನ್ನೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿ ಶವ ಪತ್ತೆ

ಶ್ರೀರಂಗಪಟ್ಟಣ: ತಾಲೂಕಿನ ಆರತಿ ಉಕ್ಕಡ ದೇವಸ್ಥಾನದ ಬಳಿಯ ತೋಟದಲ್ಲಿ ಅಪರಿಚಿತ ಪುರುಷ ವ್ಯಕ್ತಿಯ ಶವ ದೊರೆತಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಎಲ್ಲಿಂದಲೊ ದೇವಸ್ಥಾನದ ಬಳಿಗೆ ಊಟ ಮಾಡಲು ಬಂದಿದ್ದು, ವಿಶ್ರಾಂತಿಗಾಗಿ ಮಲಗಿದ್ದ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಯಾವುದೋ ಕಾಯಿಲೆ, ಹೃದಯಘಾತ ಅಥವಾ ಅತಿಯಾಗಿ ಮದ್ಯಪಾನ ಮಾಡಿ ಮೃತಪಟ್ಟಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಕಂದು ಮೈಬಣ್ಣ ದೃಢಕಾಯ ಶರೀರ ಉದ್ದನೆಯ ಮೀಸೆ ಗಡ್ಡ ಮೈಮೇಲೆ ಹೆಚ್ಚಿನ ಕೂದಲು ಇರುತ್ತೆ ಬಲಕೈಯಲ್ಲಿ ಹಸಿರು ಹಚ್ಚೆ ಇದ್ದು ಅಸ್ಪಷ್ಟವಾಗಿರುತ್ತದೆ. ಈ ಬಗ್ಗೆ ಅ.8 ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಶವವನ್ನು ಮೈಸೂರು ಕೆಆರ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಈ ವ್ಯಕ್ತಿಯ ಯಾರಾದರೂ ವಾರಸ್ದರಿದ್ದಲ್ಲಿ ಪೊಲೀಸರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.