ಸಾರಾಂಶ
ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಜೊತೆ ಸಿದ್ದರಾಮಯ್ಯ ಸಭೆಕನ್ನಡಪ್ರಭ ವಾರ್ತೆ, ಬೆಂಗಳೂರು
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಗುರುವಾರ) ಆರೋಗ್ಯ ಇಲಾಖೆ ಹಾಗೂ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಜತೆ ಮಹತ್ವದ ಸಭೆ ನಡೆಸಲಿದ್ದು, ‘ಖಾಸಗಿ ಆಸ್ಪತ್ರೆಗಳಲ್ಲಿನ ಕೊರೋನಾ ಚಿಕಿತ್ಸಾ ದರ ನಿಗದಿ ಹಾಗೂ ಆರ್‌ಟಿ-ಪಿಸಿಆರ್ ಪರೀಕ್ಷಾ ಶುಲ್ಕ ನಿಗದಿ, ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ವೈದ್ಯಕೀಯ ಪರಿಕರಗಳಿಗೆ ಹಣಕಾಸು ಇಲಾಖೆ ಅನುಮೋದನೆ’ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.ಇದೇ ವೇಳೆ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆಯಲಿದ್ದು, ಈ ವೇಳೆ ಸೋಂಕು ಹರಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ 1 ಗಂಟೆಗೆ ಆರೋಗ್ಯ ಇಲಾಖೆ ಸಚಿವರು, ಅಧಿಕಾರಿಗಳು, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ.ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಉಚಿತವಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ದರ ನಿಗದಿ ಮಾಡಬೇಕು. ಇನ್ನು ಕೊರೋನಾ ಸೋಂಕು ಪ್ರಕರಣಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟು ಶುಲ್ಕ ವಸೂಲಿ ತಡೆಯಲು ಎಷ್ಟು ಚಿಕಿತ್ಸಾ ಶುಲ್ಕ ನಿಗದಿ ಮಾಡಬೇಕು ಎಂಬ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ.
ಐಸಿಯು ಬೆಡ್, ಆಕ್ಸಿಜನ್ ಬೆಡ್ ಹಾಗೂ ಔಷಧಗಳ ಲಭ್ಯತೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಆರೋಗ್ಯ ಇಲಾಖೆ ಆಧಿಕಾರಿಗಳು ಕೊರೋನಾ ಸೋಂಕು ಚಿಕಿತ್ಸೆಗಾಗಿ ಅಗತ್ಯವಿರುವ ಪ್ಯಾರಾಸಿಟಮಲ್, ಆ್ಯಂಟಿಬಯೋಟಿಕ್ ಔಷಧಗಳು, ಪಿಪಿಇ ಕಿಟ್ ಖರೀದಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಸ್ತಾವನೆ ಮಂಡಿಸಲಿದ್ದಾರೆ. ಇದಕ್ಕಾಗಿ ಹಣಕಾಸು ಇಲಾಖೆ ಅನುಮೋದನೆ ಕೋರಲಿದ್ದಾರೆ ಎಂದು ತಿಳಿದುಬಂದಿದೆ.ಇನ್ನು ರಾಜ್ಯದಲ್ಲಿ ಅವಧಿ ಚಾಲ್ತಿಯಲ್ಲಿರುವ (ಎಕ್ಸ್‌ಪೈರಿ ಆಗದ) 7 ಲಕ್ಷದಷ್ಟು ಆರ್‌ಟಿ-ಪಿಸಿಆರ್ ಕೊರೋನಾ ಸೋಂಕು ಪರೀಕ್ಷಾ ಕಿಟ್‌ಗಳ ದಾಸ್ತಾನು ಇದೆ.
ಸ್ವಾಬ್ (ಗಂಟಲು ದ್ರವ) ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಾಗಿಸಲು ಅಗತ್ಯವಿರುವ 3 ಲಕ್ಷ ವೈರಸ್ ಟ್ರಾನ್ಸ್‌ಪೋರ್ಟ್ ಮೀಡಿಯಂ (ವಿಟಿಎಂ) ಕಿಟ್ ಹಾಗೂ ಪರೀಕ್ಷೆಗಾಗಿ 30,000 ಆರ್.ಎ.ಟಿ. (ರ್‍ಯಾಪಿಡ್ ಆ್ಯಂಟಿಜನ್ ಕಿಟ್) ಕಿಟ್‌ಗಳ ಖರೀದಿಗೆ ಮಾತ್ರ ಟೆಂಡರ್ ಮಾಡಲಾಗಿದೆ. ಇದಕ್ಕೂ ಹಣಕಾಸು ನೆರವು ಕೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸರಣಿ ಸಭೆ: ಶುಕ್ರವಾರದಿಂದ ಕೊರೋನಾ ಕುರಿತು ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಶುಕ್ರವಾರ ಸಭೆ ನಡೆಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಾಂತ್ರಿಕ ಸಲಹಾ ಸಮಿತಿ ಸಭೆಗೆ ಸೂಚಿಸಿದ್ದರು. ತಾಂತ್ರಿಕ ಸಲಹಾ ಸಮಿತಿಯು ಭಾನುವಾರ ಹಾಗೂ ಮಂಗಳವಾರ ಎರಡು ಹಂತದಲ್ಲಿ ಸಭೆ ನಡೆಸಿತ್ತು. ಬುಧವಾರ ಆರೋಗ್ಯ ಸಚಿವರು ಕೇಂದ್ರ ಆರೋಗ್ಯ ಸಚಿವರೊಂದಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದರು. ಇದೀಗ ಗುರುವಾರ ಖುದ್ದು ಮುಖ್ಯಮಂತ್ರಿಗಳೇ ಸಭೆ ನಡೆಸುತ್ತಿದ್ದಾರೆ.