ಸಾರಾಂಶ
ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದಲ್ಲಿ ಮೇಸ್ತ್ರಿ ದಂಪತಿ ಮೃತದೇಹಗಳು ಪತ್ತೆಯಾಗಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಡಾಲರ್ಸ್ ಕಾಲೋನಿ ನಿವಾಸಿಗಳಾದ ಮೆಹಬೂಬ್ (45) ಹಾಗೂ ಪರ್ವಿನಾ (35) ಮೃತ ದುರ್ದೈವಿಗಳು. ನಿರ್ಮಾಣ ಹಂತದ ಕಟ್ಟಡದ ಕಡೆಯಿಂದ ಬರುತ್ತಿದ್ದ ದುರ್ವಾಸನೆಯಿಂದ ಆ ಕಟ್ಟಡದ ಬಳಿಗೆ ನೆರೆಹೊರೆಯವರು ಗುರುವಾರ ಬೆಳಗ್ಗೆ ತೆರಳಿದ್ದಾಗ ಕೊಳತೆ ಸ್ಥಿತಿಯಲ್ಲಿ ಸತಿ-ಪತಿ ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದೊಂದು ವರ್ಷದಿಂದ ಡಾಲರ್ಸ್ ಕಾಲೋನಿಯಲ್ಲಿ ವೈದ್ಯರೊಬ್ಬರ ನಿರ್ಮಾಣ ಹಂತದ ಮನೆ ಕಟ್ಟಡದ ಮೇಸ್ತ್ರಿಯಾಗಿ ಯಾದಗಿರಿ ಜಿಲ್ಲೆ ಮೆಹಬೂಬ್ ಕೆಲಸ ಮಾಡುತ್ತಿದ್ದು, ಅದೇ ಕಟ್ಟಡದ ತಾತ್ಕಾಲಿಕ ಶೆಡ್‌ನಲ್ಲಿ ತನ್ನ ಪತ್ನಿ ಪರ್ವಿನಾ ಜತೆ ಆತ ವಾಸವಾಗಿದ್ದ. ತನ್ನ ಮಕ್ಕಳನ್ನು ಪೋಷಕರ ಬಳಿಯೇ ಪರ್ವಿನಾ ಬಿಟ್ಟಿದ್ದು, ಅಲ್ಲೇ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಹಲವು ದಿನಗಳಿಂದ ಈ ದಂಪತಿ ಮಧ್ಯೆ ಕೌಟುಂಬಿಕ ಕಲಹ ನಡೆದಿದ್ದು, ಆಗಾಗ್ಗೆ ಜಗಳ ಸಹ ಮಾಡಿಕೊಳ್ಳುತ್ತಿದ್ದರು. ರಂಜಾನ್ ಹಬ್ಬಕ್ಕೆ ಊರಿಗೆ ಹೋಗಿ ಸತಿ-ಪತಿ ಮರಳಿದ್ದರು. ಮೂರು ದಿನಗಳ ಹಿಂದೆ ಕೌಟುಂಬಿಕ ವಿಚಾರವಾಗಿ ಅವರ ಮಧ್ಯೆ ಉಂಟಾದ ಜಗಳವು ವಿಕೋಪಕ್ಕೆ ತಿರುಗಿ ದುರಂತ ಅಂತ್ಯ ಕಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕಟ್ಟಡದಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಮೆಹಬೂಬ್ ಹಾಗೂ ನೇಣು ಬಿಗಿದ ಸ್ಥಿತಿಯಲ್ಲಿ ಪರ್ವಿನಾ ಮೃತದೇಹಗಳು ಪತ್ತೆಯಾಗಿವೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಪತಿ ಮೃತಪಟ್ಟ ಬಳಿಕ ಆಕೆ ನೇಣು ಹಾಕಿಕೊಂಡಿರುವ ಸಾಧ್ಯತೆಗಳಿವೆ. ಈ ಬಗ್ಗೆ ಮರಣೋತ್ತರ ಪರೀಕ್ಷಾ ವರದಿ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.